ರಟ್ಟಿಹಳ್ಳಿ: ಮದಗ-ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆ ಆಧುನೀಕರಣಕ್ಕೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಸಮಿತಿಯೊಂದಿಗೆ 15ನೇ ವಿಷಯವಾಗಿ ಪ್ರಸ್ತಾಪಿಸಿ 59 ಕೋಟಿ ರೂ.ಗಳ ಅನುದಾನಕ್ಕೆ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದದಲ್ಲಿ ಜರುಗಲಿರುವ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಅನುದಾನ ಮಂಜೂರಾತಿಗೆ ಒಪ್ಪಿಗೆ ಪಡೆಯಲಾಗವುದು. ಅನುದಾನ ಮಂಜೂರಾದ ಕೂಡಲೇ ಕೆರೆಗಳ ಕಾಲುವೆಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತುಂಗಾ ಮೇಲ್ದಂಡೆ ಕಾಲುವೆ ಹಾದು ಹೋಗಿರುವ ಹೊನ್ನಾಳಿ ತಾಲೂಕಿನ ಬಳಿ ಕಾಲುವೆ ಒಡೆದ ಪರಿಣಾಮ ನೀರು ಅಕ್ಕ ಪಕ್ಕ ಜಮೀನುಗಳಿಗೆ ನುಗ್ಗಿ ಸಮಸ್ಯೆಯಾಗಿದೆ. ಅದೃಷ್ಟವಶಾತ್ ಈ ಕಾಲುವೆಯ ನೀರು ಪಕ್ಕದ ಹಳ್ಳಕ್ಕೆ ಹೋಗಿರುವುದರಿಂದ ಹೆಚ್ಚು ಬೆಳೆಗಳಿಗೆ ಹಾನಿಯಾಗಿಲ್ಲ. ಕಾಲುವೆಗಳು ನಿರ್ವಣವಾಗಿ ಸುಮಾರು ವರ್ಷಗಳೇ ಕಳೆದಿರುವುದರಿಂದ ಕಾಲುವೆಗಳ ಆಧುನೀಕರಣಕ್ಕೆ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತದೆ ಎಂದರು.
ಮದಗದ ಕೆರೆಗೆ ಸೆ. 3ರಂದು ಬೆಳಗ್ಗೆ 11 ಗಂಟೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಇತರರು ಉಪಸ್ಥಿತರಿರುವರು ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ದುರ್ಗಪ್ಪ ನೀರಲಿಗೆ, ಕೆಡಿಪಿ ಸಮಿತಿ ಸದಸ್ಯ ಪರಮೇಶಪ್ಪ ಕಟ್ಟೇಕಾರ, ರವೀಂದ್ರ ಮುದಿಯಪ್ಪನವರ, ಕಪಿಲ ಪೂಜಾರ, ವಿ.ಎನ್. ಪ್ಯಾಟಿಗೌಡ್ರ, ವಸಂತ ದ್ಯಾವಕ್ಕಳವರ, ಮಂಜು ಅಸ್ವಾಲಿ, ಇತರರಿದ್ದರು.