ಹಿಪ್ಪರಗಿ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ಹರಿಯುತ್ತಿರುವ ಅಪಾರ ನೀರು. 
ಜಿಲ್ಲೆ

ಕೃಷ್ಣಾ ನದಿಗೆ 58 ಸಾವಿರ ಕ್ಯೂಸೆಕ್ ನೀರು

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆ ಅಬ್ಬರದಿಂದ ಕೃಷ್ಣಾ ನದಿಗೆ ನೀರಿನ ಹರಿವು ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯ ಹಿಪ್ಪರಗಿ ಜಲಾಶಯದಿಂದ ನದಿಗೆ ಬಿಡುವ ನೀರಿನ ಪ್ರಮಾಣದಲ್ಲೂ ಏರಿಕೆ ಆಗಿದೆ. ಸೋಮವಾರ ಸಂಜೆ 58 ಸಾವಿರ ಕ್ಯೂಸೆಕ್‌ಗೆ ತಲುಪಿದೆ.

ಹಿಪ್ಪರಗಿ ಬ್ಯಾರೇಜ್‌ಗೆ ಒಳಹರಿವು 46795 ಕ್ಯೂಸೆಕ್ ಇದೆ. 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಡ್ಯಾಂನಲ್ಲಿ 3.148 ಟಿಎಂಸಿ ನೀರು ಸಂಗ್ರಹ ಮಾಡಲಾಗಿದೆ. ಸೋಮವಾರ ಬೆಳಗ್ಗೆ 49101 ಕ್ಯೂಸೆಕ್ ಹೊರಹರಿವು ಇತ್ತು. ಕಲ್ಲೋಳ ಬ್ಯಾರೇಜ್‌ನಿಂದ ಹೆಚ್ಚಿನ ನೀರು ಹೊರಬಿಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ವೇಳೆ ಹಿಪ್ಪರಗಿಯಿಂದ ಕೃಷ್ಣಾ ನದಿಗೆ ಬಿಡುವ ನೀರಿನ ಪ್ರಮಾಣವನ್ನು 58 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಇದು ಇನ್ನಷ್ಟು ಜಾಸ್ತಿ ಆಗುವ ಸಂಭವವೂ ಇದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದ್ದಾರೆ.

ಆದರೆ, ಕೃಷ್ಣಾ ನದಿಯಲ್ಲಿ ಹರಿಯುತ್ತಿರುವ ಈಗಿನ ನೀರಿನ ಪ್ರಮಾಣದಿಂದ ಯಾವುದೇ ಪ್ರವಾಹದ ಸನ್ನಿವೇಶ ಇಲ್ಲ. 2.5 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದರೆ ಮಾತ್ರ ಪ್ರವಾಹ ಪರಿಸ್ಥಿತಿ ಬರಬಹುದು. ಸದ್ಯಕ್ಕೆ ಅಂತಹ ಯಾವುದೇ ಭೀತಿ ಇಲ್ಲ. ಅತ್ತ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ನವಜಾದಲ್ಲಿ 112ಎಂಎಂ ಮಳೆ, ಕೊಯ್ನದಲ್ಲಿ 73 ಎಂಎಂ, ಮಹಾಬಳೇಶ್ವರದಲ್ಲಿ 51 ಎಂಎಂ, ರಾಧಾನಗರಿಯಲ್ಲಿ 115 ಎಂಎಂ, ದೂದಗಂಗಾದಲ್ಲಿ 68 ಎಂಎಂ ಮಳೆ ಆಗಿದೆ.