ಮುದ್ದೇಬಿಹಾಳ: ಪಟ್ಟಣಕ್ಕೆ 24*7 ಕುಡಿಯುವ ನೀರಿನ ಯೋಜನೆಗಾಗಿ ಒಟ್ಟಾರೆ 53-58 ಕೋಟಿ ರೂ. ಅನುದಾನ ಬಳಕೆಯಾಗಲಿದೆ. ಈಗ 30 ಕೋಟಿ ರೂ. ಸಿಕ್ಕಿದ್ದು, 2ನೇ ಹಂತಕ್ಕೆ 17.45 ಕೋಟಿ ರೂ. ಸಿಗಲಿದೆ. 3ನೇ ಹಂತಕ್ಕಾಗಿ ಇನ್ನೂ 15 ಕೋಟಿ ರೂ. ಕೇಳಿದ್ದೇವೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಪುರಸಭೆ ಎದುರು ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಮತ್ತು ಪುರಸಭೆ ಸಹಯೋಗದಲ್ಲಿ ಗುರುವಾರ ನಡೆದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಪಟ್ಟಣಕ್ಕೆ ಕುಡಿಯುವ ನೀರು ವಿತರಣಾ ವ್ಯವಸ್ಥೆ ಕಲ್ಪಿಸುವ 30 ಕೋಟಿ ರೂ. ಅನುದಾನದ 24*7 ಯೋಜನೆ ಹಂತ-1ರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣಕ್ಕೆ ಮೊದಲ ಹಂತದ ಕುಡಿಯುವ ನೀರಿನ ಯೋಜನೆ ದಿ. ದೇಶಮುಖರು ಸಚಿವರಾಗಿದ್ದಾಗ ಪ್ರಾರಂಭಗೊಂಡರೂ ಪೂರ್ಣಗೊಳ್ಳಲಿಲ್ಲ. ಅಂದು ಲಕ್ಷ ರೂ. ಲೆಕ್ಕದಲ್ಲಿದ್ದ ಯೋಜನಾ ವೆಚ್ಚ ಇಂದು ಕೋಟಿ ರೂ. ಲೆಕ್ಕಕ್ಕೆ ಬದಲಾಗಿದೆ. ಜನರು ಸರ್ಕಾರದ ಯೋಜನೆ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಮಂಡಳಿಯ ವಿಜಯಪುರದ ಇಇ ಗೋವಿಂದ ಎಸ್., ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿದರು.
ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಗಣ್ಯರಾದ ಸಿ.ಪಿ. ಸಜ್ಜನ, ಸತೀಶಕುಮಾರ ಓಸ್ವಾಲ್, ಸಿ.ಎಲ್. ಬಿರಾದಾರ, ಗುರುಲಿಂಗಪ್ಪಗೌಡ ಪಾಟೀಲ, ಅಬ್ದುಲ್‌ಗಫೂರ ಮಕಾನದಾರ, ಗುರು ತಾರನಾಳ, ಕಾಮರಾಜ ಬಿರಾದಾರ, ಪ್ರಭುದೇವ ಕಲಬುರ್ಗಿ, ಪುರಸಭೆಯ ಚುನಾಯಿತ, ನಾಮನಿರ್ದೇಶಿತ ಸದಸ್ಯರು ಇದ್ದರು. ಪಿಂಟು ಸಾಲಿಮನಿ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿ, ವಂದಿಸಿದರು.
ಮುದ್ದೇಬಿಹಾಳ ಪುರಸಭೆಗೆ ಸುತ್ತಲಿನ ಬಿದರಕುಂದಿ, ಹಡಲಗೇರಿ, ಶಿರೋಳ, ಮುದ್ನಾಳ ಸೇರಿಸಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
ಸಿ.ಎಸ್. ನಾಡಗೌಡ, ಶಾಸಕರು.
ಶಾಸಕರು ವೇದಿಕೆಯಲ್ಲೇ ದಿಢಿರ್ ಅಸ್ವಸ್ಥರಾದದ್ದು ಹಲವರ ಆತಂಕಕ್ಕೆ ಕಾರಣವಾಯಿತು. ತಕ್ಷಣ ವೈದ್ಯ ಡಾ. ಪರಶುರಾಮ ವಡ್ಡರ ಅವರನ್ನು ಕರೆಸಿ ಆರೋಗ್ಯ ತಪಾಸಿಸಲಾಯಿತು. ಬಳಿಕ ಶಾಸಕರನ್ನು ಕಾರಿನಲ್ಲಿ ಹುಡ್ಕೋದಲ್ಲಿರುವ ಸ್ವಗೃಹಕ್ಕೆ ಕರೆದೊಯ್ಯಲಾಯಿತು.
ಸಮಾರಂಭದಲ್ಲಿ ಲೋಪ, ಜನರ ಕೊರತೆಯಿಂದ ಶಾಸಕರು ಅಸಮಾಧಾನಗೊಂಡು 30 ಕೋಟಿ ರೂ. ಅನುದಾನದ ಕಾಮಗಾರಿಯ ಭೂಮಿಪೂಜೆ ಕುರಿತು ವ್ಯಾಪಕ ಪ್ರಚಾರ ನಡೆಸುವಲ್ಲಿ ವಿಲರಾದ, ಮಾಧ್ಯಮದವರಿಗೆ ಮುಂಚಿತವಾಗಿಯೇ ಮಾಹಿತಿ ನೀಡದೆ ನಿರ್ಲಕ್ಷೃ ತೋರಿದ ಜಲಮಂಡಳಿ, ಪುರಸಭೆ ಅಧಿಕಾರಿಗಳ ಮೇಲೆ ಗರಂ ಆಗಿ ನಿರ್ಲಕ್ಷೃಕ್ಕೆ ವಿಷಾಧಿಸಿದರು. ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಕುಡಿಯುವ ನೀರಿಗಾಗಿ ಏಕ ಬಳಕೆ ಪ್ಲಾಸ್ಟಿಕ್ ಬಾಟಲ್ ಬಳಸದಂತೆ ಸರ್ಕಾರದ ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದ್ದರೂ ಶಾಸಕರಾದಿಯಾಗಿ ಎಲ್ಲರಿಗೂ ಬಾಟಲ್ ವಿತರಿಸಿ ಲೋಪ ಎಸಗಲಾಯಿತು. ಆಮಂತ್ರಣ ಪತ್ರಿಕೆಯಲ್ಲಿ ಸಚಿವರು, ಸಂಸದರು, ಶಾಸಕರು, ಎಂಎಲ್‌ಸಿಗಳು, ಇಲಾಖೆ ಹಿರಿಯ ಅಧಿಕಾರಿಗಳ ಹೆಸರಿದ್ದರೂ ಯಾರೊಬ್ಬರೂ ಬರಲಿಲ್ಲ. ವೇದಿಕೆ ಖಾಲಿ ಉಳಿಯುವ ಮುಜುಗರ ತಪ್ಪಿಸಲು ಶಾಸಕರು ಪಕ್ಷದ ಮುಖಂಡರು, ಪುರಸಭೆ ಸದಸ್ಯರನ್ನು ಕರೆದು ಕೂಡಿಸುವಂತಾಯಿತು.