ರೋಣ: ಅನರ್ಹರು ಬಿಪಿಎಲ್ ಪಡಿತರ ಚೀಟಿ ಮರಳಿಸುವಂತೆ ರಾಜ್ಯ ಸರ್ಕಾರ ನೀಡಿದ ಸೂಚನೆಗೆ ರೋಣ ತಾಲೂಕಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿಯವರೆಗೆ 570ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ಕಾರ್ಡ್ಗಳನ್ನು ಮರಳಿಸಿದ್ದಾರೆ.
ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಮಾಡಿಕೊಂಡ ಮನವಿಗೆ ಸ್ಪಂದಿಸಿ ಪಟ್ಟಣದ ಆಹಾರ ವಿಭಾಗದ ಕಚೇರಿಗೆ ಬಂದ ಅನರ್ಹರು ಬಿಪಿಎಲ್ ಕಾರ್ಡ್ಗಳನ್ನು ಮರಳಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಗುಮಾಸ್ತೆ ಸುವರ್ಣಾ ಜುಮ್ಮನಕಟ್ಟಿ ಹೇಳಿದರು.
ಸರ್ಕಾರಿ ನೌಕರರು ಇದ್ದಾರೆ: ಹೀಗೆ ಪಡಿತರ ಚೀಟಿ ಮರಳಿಸಿದವರಲ್ಲಿ ಬಹುತೇಕರು ಸರ್ಕಾರಿ ನೌಕರರಾಗಿದ್ದಾರೆ. ಅದರಲ್ಲಿ ಕೆಲವರು ಕಳೆದೊಂದು ವರ್ಷದಿಂದ ಸರ್ಕಾರಿ ನೌಕರಿಗೆ ಸೇರಿದ್ದಾರೆ. ಆದರೆ, ಕಾರ್ಡ್ ಮರಳಿಸದೇ ರೇಷನ್ ಪಡೆಯುತ್ತಿದ್ದರು. ಸರ್ಕಾರದ ಕಟ್ಟುನಿಟ್ಟಿನ ಸೂಚನೆಯಿಂದಾಗಿ ಅಂತಹವರು ಮುಂದೆ ನೌಕರಿಗೆ ಏನಾದರೂ ತೊಂದರೆಯಾಗದಿರಲಿ ಎಂಬುದಕ್ಕಾಗಿ ಮರಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಾರು ಅನರ್ಹರು?: ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು, ಸಹಕಾರಿ ಸಂಘಗಳ ಕಾಯಂ ನೌಕರರು, ವಕೀಲರು, ದೊಡ್ಡ ವರ್ತಕರು, ಬಹುರಾಷ್ಟ್ರೀಯ ಕಂಪನಿಯ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುವ ಸರ್ಕಾರಿ ನೌಕರರು, ಅನುದಾನಿತ ಶಾಲೆ-ಕಾಲೇಜ್ಗಳ ನೌಕರರು ಮತ್ತಿತರರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರೆ ಅದು ಕಾನೂನು ಬಾಹಿರವಾಗುತ್ತದೆ.
ಬಿಪಿಎಲ್ ಪಡಿತರ ಚೀಟಿ ಹೊಂದಲು ಸರ್ಕಾರ ಕುಟುಂಬದ ವಾರ್ಷಿಕ ಆದಾಯವನ್ನು 1.20 ಲಕ್ಷ ರೂ. ನಿಗದಿಪಡಿಸಿದೆ. ಈ ಆದಾಯ ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ಗಳನ್ನು ಹೊಂದುವಂತಿಲ್ಲ. | ಜಿ.ಬಿ. ಜಕ್ಕನಗೌಡ್ರ, ತಹಸೀಲ್ದಾರ್, ರೋಣ