ಚಿಕ್ಕಬಳ್ಳಾಪುರ: ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಂಜೂರಾತಿ, ಫಲಾನುಭವಿಗಳ ಆಯ್ಕೆ ಮತ್ತು ಅನುದಾನ ವಿಳಂಬ ಸೇರಿ ನಾನಾ ಸಮಸ್ಯೆಗಳು ಗುರಿ ಸಾಧನೆಗೆ ಹಿನ್ನೆಡೆಯಾಗಿದೆ.
ಜಿಲ್ಲೆಯಲ್ಲಿ ಸಕಾಲದಲ್ಲಿ ವಸತಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಮತ್ತು ಗ್ರಾಪಂಗಳಲ್ಲಿ ಅರ್ಹರಿಗೆ ವಸತಿ ಸೌಕರ್ಯ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುವುದು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರವು ಜಿಲ್ಲೆಗೆ 2021-22ನೇ ಸಾಲಿಗೆ ಬಸವ ವಸತಿ ಯೋಜನೆಯಡಿ 4,347 ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ 1,413 ಮನೆ ಸೇರಿ ಒಟ್ಟು 5,760 ಮನೆಗಳ ನಿರ್ಮಾಣ ಗುರಿ ನೀಡಿದೆ.
ತಾಲೂಕುವಾರು ಬಸವ ವಸತಿ: ಜಿಲ್ಲೆಯಲ್ಲಿ ಬಸವ ವಸತಿ ಯೋಜನೆಯಡಿ ಬಾಗೇಪಲ್ಲಿ ತಾಲೂಕಿಗೆ 666, ಚಿಕ್ಕಬಳ್ಳಾಪುರ 655, ಚಿಂತಾಮಣಿ 1001, ಗೌರಿಬಿದನೂರು 1,036, ಗುಡಿಬಂಡೆಗೆ 205, ಶಿಡ್ಲಘಟ್ಟ 784 ಮನೆ ಸೇರಿ 4,347 ಮನೆ ನಿರ್ಮಾಣದ ಗುರಿ ನೀಡಲಾಗಿದೆ. ಈ ಪೈಕಿ ಸಾಮಾನ್ಯ ವರ್ಗಕ್ಕೆ 3,771 ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ 576 ಮನೆಗಳನ್ನು ಮೀಸಲಿರಿಸಲಾಗಿದೆ.
ಅಂಬೇಡ್ಕರ್ ನಿವಾಸ ಲೆಕ್ಕ:
2021-22ನೇ ಸಾಲಿನ ಅಂಬೇಡ್ಕರ್ ನಿವಾಸ ಯೋಜನೆಯಡಿ 1,413 ಮನೆಗಳ ನಿರ್ಮಾಣದ ಗುರಿ ಪೈಕಿ ಬಾಗೇಪಲ್ಲಿ ತಾಲೂಕಿಗೆ 214, ಚಿಕ್ಕಬಳ್ಳಾಪುರ 215, ಚಿಂತಾಮಣಿ 329, ಗೌರಿಬಿದನೂರು 334, ಗುಡಿಬಂಡೆ 65 ಹಾಗೂ ಶಿಡ್ಲಘಟ್ಟ 256 ಮನೆಗಳ ಮಂಜೂರಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿಗೆ 995 ಹಾಗೂ ಪಂಗಡಕ್ಕೆ 418 ಮನೆಗಳನ್ನು ಮೀಸಲಿರಿಸಲಾಗಿದೆ.
ಪ್ರತಿ ವರ್ಷ ಜಿಲ್ಲೆಗೆ ಸಾವಿರಾರು ಮನೆಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಮಂಜೂರು ಮಾಡುತ್ತಿವೆ. ಆದರೆ, ಫಲಾನುಭವಿಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಆಗುತ್ತಿಲ್ಲ ಎನ್ನುವುದರ ಜತೆಗೆ ಅರ್ಹರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಅದರಲ್ಲೂ ಗ್ರಾಪಂ ವ್ಯಾಪ್ತಿಯ ಗ್ರಾಮ ಸಭೆಗಳ ಮೂಲಕ ಫಲಾನುಭವಿಗಳ ಆಯ್ಕೆ ಸಮರ್ಪಕವಾಗಿ ನಡೆಯದಿರುವುದರಿಂದ ವಸತಿ ಯೋಜನೆಗಳು ನಿರೀಕ್ಷೆಗೆ ಅನುಗುಣವಾಗಿ ಪ್ರಗತಿ ಕಾಣುತ್ತಿಲ್ಲ. ಇದೀಗ ಸರ್ಕಾರ ಹೊಸದಾಗಿ 5,760 ಮನೆಗಳ ನಿರ್ಮಾಣ ಗುರಿಯನ್ನು ನೀಡಿದ್ದು, ಜಿಲ್ಲೆಯ 157 ಗ್ರಾಪಂಗಳು ಯಾವ ರೀತಿ ಸಾಧಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.