ಜಿಲ್ಲೆ

4652 ಕಾರ್ಡ್​ ಬಿಪಿಎಲ್​ ಟು ಎಪಿಎಲ್​!

ತಿಪ್ಪಣ್ಣ ಅವಧೂತ ರೋಣ

ರಾಜ್ಯ ಸರ್ಕಾರ ಅನರ್ಹ ಬಿಪಿಎಲ್​ ಕಾರ್ಡ್​ ಪತ್ತೆ ಮಾಡಿ ರದ್ದು ಮಾಡುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ 56 ಬಿಪಿಎಲ್​ ಕಾರ್ಡ್​ ರದ್ದಾಗಿದ್ದು, 4652 ಕಾರ್ಡ್​ ಎಪಿಎಲ್​ಗೆ ಬದಲಾವಣೆ ಹೊಂದಿವೆ.

ಜಿಲ್ಲೆಯಲ್ಲಿ 9573 ಪಡಿತರ ಕಾರ್ಡ್​ ಪರಿಶೀಲನೆಗೊಳಪಟ್ಟಿದ್ದು, 4708 ಕಾರ್ಡ್​ ಯಥಾಸ್ಥಿತಿಯಲ್ಲಿವೆ. ಅದರಲ್ಲಿ ನಿಧನ ಹೊಂದಿದವರ ಹೆಸರಲ್ಲಿದ್ದ 56 ಬಿಪಿಎಲ್​ ಕಾರ್ಡ್​ ರದ್ದು ಮಾಡಲಾಗಿದೆ. ಆಹಾರ ಇಲಾಖೆ ಆಯುಕ್ತರೇ ಖುದ್ದು ಪರಿಶೀಲನೆ ನಡೆಸಿ, ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಆದಾಯ ಹೊಂದಿದವರ ಪಟ್ಟಿ ಸಿದ್ಧಪಡಿಸಿ ಎಲ್ಲ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಪಟ್ಟಿ ಪರಿಶೀಲನೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಎಲ್ಲ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆ ಪಟ್ಟಿ ಪ್ರತಿ ನ್ಯಾಯಬೆಲೆ ಅಂಗಡಿಕಾರರಿಗೆ ನೀಡಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ನ್ಯಾಯಬೆಲೆ ಅಂಗಡಿ ಎದುರು ಅಂಥವರ ಮಾಹಿತಿ ಅಂಟಿಸಿದ್ದಾರೆ.

ಮುಂದೇನು?:ಬಿಪಿಎಲ್​ ಕಾರ್ಡ್​ದಾರರು 1.20 ಲಕ್ಷ ರೂ. ಮೀರಿದ ಆದಾಯದ ಮೂಲ ಇಲಾಖೆ ಅಧಿಕಾರಿಗಳಿಗೆ ನೀಡಬೇಕು. ಜತೆಗೆ ಕಾರ್ಡ್​ನಲ್ಲಿನ ಫಲಾನುಭವಿಗಳ ಆಧಾರ್​ ಕಾರ್ಡ್​, ಬ್ಯಾಂಕ್​ ಪಾಸ್​ಬುಕ್​ ಝರಾಕ್ಸ್​ ನೀಡಬೇಕು. ಆದಾಯದ ಮಿತಿ ಯಾವ ಮೂಲದಿಂದ ಬಂದಿದೆ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಿ, ಮಾಹಿತಿ ಸರಿಯಿದ್ದರೆ ಬಿಪಿಎಲ್​ ಕಾರ್ಡ್​ ಮುಂದುವರಿಯುತ್ತದೆ. ಇಲ್ಲದಿದ್ದರೆ ಅಂತಹ ಕಾರ್ಡ್​ಗಳು ಎಪಿಎಲ್​ ಆಗಿ ಪರಿವರ್ತನೆಯಾಗುತ್ತವೆ.

ಎಪಿಎಲ್​ಗೆ ಬದಲಾದದ್ದು ಏಕೆ?: 7.5 ಎಕರೆಗಿಂತ ಅಧಿಕ ಜಮೀನು ಹೊಂದಿದವರು, ಹೊರ ರಾಜ್ಯದವರು, ತೆರಿಗೆ ಪಾವತಿದಾರರು ಹಾಗೂ ವರ್ಷಕ್ಕೆ 20 ಲಕ್ಷ ರೂ. ಮೀರಿ ವರ್ಗಾವಣೆ ಮಾಡಿದವರು ಬಿಪಿಎಲ್​ ಕಾರ್ಡ್​ ಪಟ್ಟಿಯಲ್ಲಿದ್ದರು. ಅವರನ್ನು ಗುರುತಿಸಿ ಈಗ ಎಪಿಎಲ್​ ಕಾರ್ಡ್​ಗೆ ವರ್ಗಾಯಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ 9573 ಬಿಪಿಎಲ್​ ಕಾರ್ಡ್​ ಪರಿಶೀಲನೆಗೊಳಪಡಿಸಲಾಗಿದೆ. ಅದರಲ್ಲಿ 4708 ಕಾರ್ಡ್​ ಯಥಾಸ್ಥಿತಿಯಲ್ಲಿವೆ. 4652 ಕಾರ್ಡ್​ವಿವಿಧ ಕಾರಣಗಳಿಂದ ಎಪಿಎಲ್​ ಕಾರ್ಡ್​ ಆಗಿ ಪರಿವತಿರ್ಸಲಾಗಿದೆ. ಜಿಲ್ಲೆಯಲ್ಲಿ 56 ಬಿಪಿಎಲ್​ ಕಾರ್ಡ್​ ರದ್ದುಪಡಿಸಲಾಗಿದೆ. ಅವು ನಿಧನ ಹೊಂದಿದವರ ಕಾರ್ಡ್​ಗಳಾಗಿವೆ. > ರಮೇಶ ಎಂ.ಎಸ್​., ಗದಗ ಆಹಾರ ಇಲಾಖೆ ಡಿಡಿ ಮನೆ ಕಟ್ಟಿಸಿದ ಸಾಲಕ್ಕಾಗಿ ನಾವು ಐಟಿ ರಿರ್ಟನ್​ ಸಲ್ಲಿಸಿದ್ದೇವೆ. ಈಗ ಅದನ್ನೇ ಹಿಡಿದುಕೊಂಡು ನಮ್ಮ ಕಾರ್ಡ್​ ಪರಿಶೀಲನೆ ನಡೆಸಿದ್ದಾರೆ. ನಮಗೆ ಜಮೀನು ಇಲ್ಲ. ಇರುವುದೊಂದು ಮನೆ. ನಮ್ಮ ಮನೆಯಲ್ಲಿ ಯಾರೂ ಸರ್ಕಾರಿ ನೌಕರರಿಲ್ಲ. ಹೀಗಿದ್ದರೂ ನಮ್ಮ ಕಾರ್ಡ್​ ಪರಿಶೀಲನೆಗೆ ಒಳಪಡಿಸಿದ್ದಾರೆ. > ಬಾಬುರಾವ್​ ಸಾವಂತ, ಸೂಡಿ ನಿವಾಸಿ