ಕೂಡ್ಲಿಗಿ ಪ್ರವಾಸಿ ಮಂದಿರದ ಆವರಣದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವಿವಿಧ ಅನುದಾನಗಳ ಅಡಿಯಲ್ಲಿ ಮಂಜೂರಾದ 550 ಕೋಟಿ ರೂ. ಕಾಮಗಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಸಮಾಜ ಸೇವಕ ಎನ್.ಟಿ.ತಮ್ಮಣ್ಣ, ನಾಗಮಣಿ ಜಿಂಕಾಲ್ ಇತರರಿದ್ದರು. 
ಜಿಲ್ಲೆ

ಅಭಿವೃದ್ಧಿಗೆ 550 ಕೋಟಿ ರೂ.ಅನುದಾನ

ಕೂಡ್ಲಿಗಿ: ಕೂಡ್ಲಿಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪಣ ತೊಟ್ಟಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಡಾ.ಎನ್. ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ವಿವಿಧ ಅನುದಾನಗಳ ಅಡಿಯಲ್ಲಿ 550 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾ ಖನಿಜ ನಿಧಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಸೇರಿದಂತೆ ಇತರೆ ಅನುದಾನಗಳ ಅಡಿಯಲ್ಲಿ ಸುಮಾರು 550 ಕೋಟಿ ರೂ. ಅನುದಾನ ಸರ್ಕಾರ ನೀಡಿದೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಕಾಮಾಗಾರಿ ಕೈಗೆತ್ತಿಕೊಂಡು ಹಿಂದುಳಿದ ತಾಲೂಕಿನ ಸಮಸ್ಯೆ ಬಗೆಹರಿಸುವೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸಾಕಾಗುವುದಿಲ್ಲ ಇದರಿಂದ ಸರ್ಕಾರದಲ್ಲಿ ಹಣ ಇಲ್ಲ ಎಂದು ಪ್ರತಿ ಪಕ್ಷಗಳು ಹೇಳುತ್ತಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ಹಿಂದುಳಿದ ಈ ತಾಲೂಕಿಗೆ ಹಣದ ಹೊಳೆಯನ್ನೆ ಹರಿಸಿದೆ ಎಂದರು.

ಕ್ಷೇತ್ರದ ರೈತರಿಗೆ ಅನುಕೂಲವಾಗಲು ಕೃಷಿ ಮಾರುಕಟ್ಟೆಗೆ ಸೌಕರ್ಯ ಕಲ್ಪಿಸಲಾಗುವುದು. ಹುಣಸೇ ಹಣ್ಣಿನ ವಹಿವಾಟು ನಡೆಸಲು ಮಾರುಕಟ್ಟೆ ಜತೆ ಶೀಥಲಿಕರಣ ಗೋದಾಮು ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. 74 ಕೆರೆಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು. ಗ್ರಾಮೀಣ ಕುಡಿಯುವ ನೀರಿಗೆ ಸುಮಾರು 121 ಕೋಟಿ ರೂ. ವೆಚ್ಚದಲ್ಲಿ ಕಾಮಾಗಾರಿ ಆರಂಭವಾಗಿದೆ. ಹೂಡೇಂ ವಿದ್ಯುತ್ ಪ್ರಸರಣ ಕೇಂದ್ರಕ್ಕೆ 11 ಕೋಟಿ ನೀಡಿ ಕಾಮಾಗಾರಿ ಮುಗಿಯುವ ಹಂತದಲ್ಲಿದೆ. ಕ್ಷೇತ್ರದ 218 ಸರ್ಕಾರಿ ಶಾಲೆಗಳ ಮಕ್ಕಳಿಗೆ ಶುದ್ಧ ನೀರಿನ ಘಟಕ ಮಂಜೂರು ದೊರೆತಿದೆ ಎಂದರು.

ಪ್ರಮುಖರಾದ ಸಾವಜ್ಜಿ ರಾಜೇಂದ ಪ್ರಸಾದ್, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ಕುಮಾರ ಗೌಡ, ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ, ಕಾಂಗ್ರೆಸ್ ಜಿಲ್ಲಾ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಕಾವಲಿ ಶಿವಪ್ಪನಾಯಕ, ಉದಯ ಜನ್ನು, ಟಿ.ಜಿ.ಮಲ್ಲಿಕಾರ್ಜುನ ಗೌಡ, ಶಿವಪುರ ರಾಜು, ಸೂಲದಹಳ್ಳಿ ಸಿದ್ದಣ್ಣ ಇತರರಿದ್ದರು.