ಎನ್.ಆರ್.ಪುರ ಪಪಂನಲ್ಲಿ ಬಜೆಟ್ ಪ್ರತಿಯನ್ನು ಅಧ್ಯಕ್ಷೆ ಜುಬೇದಾ ಪ್ರದರ್ಶಿಸಿದರು. ಉಷಾ, ಉಮಾ, ಆರ್.ಕುಮಾರಸ್ವಾಮಿ, ಸುರಯ್ಯಬಾನು ಇತರರಿದ್ದರು.  
ಜಿಲ್ಲೆ

55 ಲಕ್ಷ ರೂ. ಮಿಗುತೆ ಬಜೆಟ್

ಎನ್.ಆರ್.ಪುರ: ಪಟ್ಟಣ ಪಂಚಾಯಿತಿಯಿಂದ 2025-26ನೇ ಸಾಲಿಗೆ 55 ಲಕ್ಷ ರೂಪಾಯಿ ಉಳಿತಾಯದ ಆಯವ್ಯಯವನ್ನು ಅಧ್ಯಕ್ಷೆ ಜುಬೇದಾ ಶುಕ್ರವಾರ ಮಂಡಿಸಿದರು.

ರಾಜಸ್ವ ಸ್ವೀಕೃತಿಗಳಿಂದ 4.58 ಕೋಟಿ ರೂ.ಗೂ ಅಧಿಕ, ಬಂಡವಾಳ ಸ್ವೀಕೃತಿಗಳಿಂದ 68 ಲಕ್ಷ, ಒಟ್ಟು 6.10 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ರಾಜಸ್ವ ಪಾವತಿ 4.44 ಕೋಟಿಗೂ ಅಧಿಕ, ಬಂಡವಾಳ ಪಾವತಿ 1.11 ಕೋಟಿ, ಒಟ್ಟು 5.55 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ. ಒಟ್ಟು 55 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ.

ವಾಣಿಜ್ಯ ಮಳಿಗೆ ಹಾಗೂ ನೆಲಬಾಡಿಗೆಯಿಂದ 77.90 ಲಕ್ಷ, ಇತರ ಜಮೆಯಿಂದ 30.35 ಲಕ್ಷ, ಆಸ್ತಿ ತೆರಿಗೆಯಿಂದ 43 ಲಕ್ಷ, ನಿವೇಶನ ಮಾರಾಟದಿಂದ 30 ಲಕ್ಷ, ನೀರಿನ ತೆರಿಗೆಯಿಂದ 20.10 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ 2 ಲಕ್ಷ, ಎಸ್‌ಎಫ್‌ಸಿ ವಿಶೇಷ ನಿಧಿ 10 ಲಕ್ಷ, 15ನೇ ಹಣಕಾಸು ಯೋಜನೆ ಅನುದಾನ 43 ಲಕ್ಷ, ಸಲ್ಮ್ ಯೋಜನೆ 6 ಲಕ್ಷ, ಆಶ್ರಯ ಯೋಜನೆ 5 ಲಕ್ಷ, ಕುಡಿಯುವ ನೀರಿನ 5 ಲಕ್ಷ, ವೇತನ 1.27 ಕೋಟಿ, ವಿದ್ಯುತ್ 1.63 ಕೋಟಿ, ಸ್ವಚ್ಛಭಾರತ್ ಯೋಜನೆ ಅನುದಾನ 17.88 ಲಕ್ಷ ಸೇರಿದಂತೆ ವಿವಿಧ ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದೆ.

ಕಚೇರಿಯ ಆಡಳಿತಾತ್ಮಕ ವೆಚ್ಚ, ನೌಕರರ ವೇತನ ಇತರ ಕಾರ್ಯಾಚರಣೆ ವೆಚ್ಚ 2.16 ಕೋಟಿ, ವಂತಿಕೆಗಳು ಮತ್ತು ಸಹಾಯಧನ 11 ಲಕ್ಷ, ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ 11 ಲಕ್ಷ, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ಮಾಣ 12 ಲಕ್ಷ, ನೀರು ವಿತರಣಾ ವ್ಯವಸ್ಥೆ 15 ಲಕ್ಷ, ಬೀದಿ ದೀಪಗಳ ವ್ಯವಸ್ಥೆ 10 ಲಕ್ಷ, ಸ್ಮಶಾನ, ಉದ್ಯಾನ, ಸಮುದಾಯ ಭವನ, ಬಸ್ ನಿಲ್ದಾಣದ ಅಭಿವೃದ್ಧಿಗೆ 33.74 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದ ಅಭಿವೃದ್ಧಿ 17.88 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಕ್ಕೆ 5.77 ಲಕ್ಷ, ಇತರ ವರ್ಗದ ಕಲ್ಯಾಣ ಕಾರ್ಯಕ್ರಮಕ್ಕೆ 1.72 ಲಕ್ಷ, ಅಂಗವಿಕಲರ ಕಾರ್ಯಕ್ರಮಕ್ಕೆ 1.37 ಲಕ್ಷ ವೆಚ್ಚ ಮಾಡಲು ಅಂದಾಜಿಸಲಾಗಿದೆ.

ಆಯವ್ಯಯ ಆಡಳಿತದ ದಿಕ್ಸೂಚಿಯಾಗಿದೆ. ಆಯವ್ಯಯದಲ್ಲಿ ಘೋಷಣೆಯಾದಂತೆ ಎಲ್ಲ ಜನಪರ ಯೋಜನೆ ಜಾರಿಯಾಗಬೇಕು. ಶವಸಂಸ್ಕಾರಕ್ಕೆ 3 ಸಾವಿರ ರೂ. ನೆರವು ನೀಡಲಾಗುತ್ತಿದೆ. ಬಡಹೆಣ್ಣು ಮಕ್ಕಳ ಮದುವೆಗೆ 5 ಸಾವಿರ ರೂ. ನೀಡಲು ಆಶಿಸಲಾಗಿತ್ತು. ವೆಚ್ಚಗಳನ್ನು ಕಡಿಮೆ ಮಾಡುವತ್ತ ಗಮನಹರಿಸಬೇಕು. ಜನರಿಗೆ ನೀಡಿದ ಭರವಸೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ತಿಳಿಸಿದರು.

ಬಜೆಟ್‌ನಲ್ಲಿ ವೆಚ್ಚ ಕಡಿತಗೊಳಿಸಿ ಉಳಿತಾಯ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ತರಲು ಪ್ರಯತ್ನಿಸಲಾಗುವುದು. ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿದಿನ ನೀರು ಪೂರೈಸಲಾಗುತ್ತಿದ್ದರೂ ನೀರಿನ ಶುಲ್ಕ ವಸೂಲಾತಿಯಾಗುತ್ತಿಲ್ಲ. ಶುಲ್ಕ ವಸೂಲಿ ಮಾಡಬೇಕು. ಉದ್ದಿಮೆಗಳ ಪರವಾನಗಿಯನ್ನು ಏ.31ರೊಳಗೆ ಮಾಡಿಸಬೇಕು. ವಾಣಿಜ್ಯ ಮಳಿಗೆಗಳ ಉಳಿಕೆ ಬಾಡಿಗೆ ವಸೂಲಿ ಮಾಡಿದರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಕಾರಿಯಾಗಲಿದೆ. ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳ ಬಾಡಿಗೆ ಪಾವತಿಸದೆ ಬಾಗಿಲು ಹಾಕಿರುವ ಮಳಿಗೆಗಳ ಒಳಗಿರುವ ಸರಕುಗಳು ಪೊಲೀಸರ ಸಹಕಾರದಿಂದ ಸುರಕ್ಷಿತವಾಗಿಟ್ಟು ಮಳಿಗೆಗಳನ್ನು ಹರಾಜು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಹೇಳಿದರು.

ಪಪಂ ಲೆಕ್ಕಾಧಿಕಾರಿ ಉಷಾ 16ನೇ ಬಾರಿ ಬಜೆಟ್ ತಯಾರಿಸಿರುವುದು ವಿಶೇಷ. ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಆರ್.ಕುಮಾರಸ್ವಾಮಿ, ಸುರಯ್ಯಬಾನು, ಪಿ.ಜೆ.ಶೋಜಾ, ಮುನಾವರಪಾಷ, ರೀನಾ ಮೋಹನ್, ರೇಖಾ, ಮುಕುಂದ, ರಜಿ, ಅಣ್ಣಪ್ಪ, ಸುಬ್ರಹ್ಮಣ್ಯ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಲಕ್ಷ್ಮಣ ಗೌಡ ಇದ್ದರು.