ಕಲಬುರಗಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕಾಯ್ದೆ ಉಲ್ಲಂಘಿಸಿದ ಜಿಲ್ಲೆಯ ೫೫ ಕ್ಲಿನಿಕ್ ಮತ್ತು ವೈದ್ಯರಿಗೆ ಒಟ್ಟು ೨೨.೨೭ ಲಕ್ಷ ರೂ. ದಂಡ ವಿಧಿಸಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೆಪಿಎಂಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೆಪಿಎಂಇ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ೪೨ ಜನರಿಗೆ ತಲಾ ೫೦ ಸಾವಿರ ರೂ., ಐವರಿಗೆ ತಲಾ ೨೦ ಸಾವಿರ ರೂ., ಐವರಿಗೆ ತಲಾ ೫ ಸಾವಿರ ರೂ., ಇಬ್ಬರಿಗೆ ತಲಾ ೧೦೦೦ ರೂ. ದಂಡ ವಿಧಿಸಿ ತಕ್ಷಣ ಭರಿಸಲು ಆದೇಶಿಸಲಾಗಿದೆ. ೬ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ದಂಡ ಕಟ್ಟಲು ತಪ್ಪಿದರೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸುವುದಾಗಿ ಡಿಸಿ ಫೌಜಿಯಾ ತರನ್ನುಮ್ ಎಚ್ಚರಿಸಿದ್ದಾರೆ.
ಕಳೆದ ಡಿಸೆಂಬರ್‌ನಿAದ ಜೂನ್‌ವರೆಗೆ ಸಹಾಯಕ ಆಯುಕ್ತರ ನೇತೃತ್ವದ ತಂಡ ನಿಯಮಿತ ದಾಳಿ ನಡೆಸಿ ೬೧ ಕ್ಲಿನಿಕ್ ಮತ್ತು ವೈದ್ಯರ ವಿರುದ್ಧ ಕೆಪಿಎಂಇ ಕಾಯ್ದೆ ಉಲ್ಲಂಘಿಸಿರುವುದನ್ನು ಮನಗಂಡು ಇಲಾಖಾ ಎಫ್‌ಐಆರ್ ದಾಖಲಿಸಿ ಡಿಸಿ ಅಧ್ಯಕ್ಷತೆಯ ಕುಂದುಕೊರತೆ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ಮಂಗಳವಾರದ ಸಭೆಗೆ ಅಗಮಿಸಿದ ವೈದ್ಯರ ಅಹವಾಲು ಆಲಿಸಿ ಡಿಸಿ ದಂಡ ವಿಧಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತಿಕಾಂತ ಸ್ವಾಮಿ, ಆಳಂದ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ನಿಗ್ಗುಡಗಿ ಇತರರಿದ್ದರು.