ಜಿಲ್ಲೆ

ಸಂಚಾರ ದಟ್ಟಣೆ ನೀಗಿಸಲು 55 ಸಾವಿರ ಕೋಟಿ ರೂ. ಯೋಜನೆ ರೂಪಿಸಿದ ಪಾಲಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಜನಸಂಖ್ಯೆಯಷ್ಟೇ ವಾಹನಗಳಿದ್ದು, ರಸ್ತೆ ಸಂಚಾರ ಹಳಿ ತಪ್ಪಿದೆ. ನಗರದೊಳಗೆ ದಟ್ಟಣೆ ಅವಧಿಯಲ್ಲಿ ಸರಾಸರಿ ವಾಹನಗಳ ಸಂಚಾರ ವೇಗ 10 ಕಿ.ಮೀ.ಗಿಂತ ಕಡಿಮೆ ಇದೆ. ಈ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿಯು 55 ಸಾವಿರ ಕೋಟಿ ರೂ. ಮೊತ್ತದ ‘ಬೆಂಗಳೂರು ನಗರ ಸಮಗ್ರ ಸಂಚಾರ ನಿರ್ವಹಣಾ ಮೂಲಸೌಕರ್ಯ ಯೋಜನೆ’ (ಸಿಬಿಸಿಟಿಎಂಐಪಿ) ಮೂಲಕ ಪರಿಹಾರ ಸೂತ್ರವನ್ನು ಸರ್ಕಾರದ ಮುಂದಿಟ್ಟಿದೆ.

ನಗರದಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಆ ಭಾಗದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿತ ಯೋಜನೆಯಲ್ಲಿ 20 ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ 16 ಎಲಿವೇಟೆಡ್ ಕಾರಿಡಾರ್ (2 ಅಂಡರ್‌ಪಾಸ್ ಸೇರಿ), ತಲಾ ಎರಡು ಡಬಲ್ ಡೆಕ್ಕರ್ ಕಾರಿಡಾರ್ ಮತ್ತು ಟನಲ್ ಕಾರಿಡಾರ್‌ಗಳನ್ನು ಅನುಷ್ಠಾನಕ್ಕೆ ತರುವ ಸಂಬಂಧ ಅಂತಿಮ ಕಾರ್ಯಸಾಧ್ಯತಾ ವರದಿಗೆ ಪಾಲಿಕೆ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಇದನ್ನಾಧರಿಸಿಯೇ ಸರ್ಕಾರದ ಗಮನಕ್ಕೆ ತಂದು ಹಂತ ಹಂತವಾಗಿ ಕಾರಿಡಾರ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉತ್ಸುಕತೆ ಹೊಂದಿದೆ.

ಭಾರಿ ಮೊತ್ತದ ಯೋಜನಾ ವೆಚ್ಚ:

ಉದ್ದೇಶಿತ ಕಾರಿಡಾರ್‌ಗಳ ಕಾಮಗಾರಿಯನ್ನು ಜಾರಿಗೆ ತರಲು ಅಂದಾಜು 54,964 ಕೋಟಿ ರೂ. ಮೊತ್ತ ವೆಚ್ಚವಾಗಲಿದೆ. ಇದರಲ್ಲಿ ಎರಡು ಟನಲ್ ಕಾರಿಡಾರ್‌ಗೆ 40 ಸಾವಿರ ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ. ಉಳಿದ ಮೊತ್ತವು ಎಲಿವೇಟೆಡ್/ಡಬಲ್ ಡೆಕ್ಕರ್ ಕಾರಿಡಾರ್‌ಗೆ ವೆಚ್ಚವಾಗಲಿದೆ. ರಿಂಗ್ ರಸ್ತೆ ಸಂಪರ್ಕಿಸುವ 5 ಎಲಿವೇಟೆಡ್ ಕಾರಿಡಾರ್‌ಗಳಿಗೆ 9,650 ಕೋಟಿ ರೂ. ಆಗಲಿದೆ. ಗೊರಗುಂಟೆಪಾಳ್ಯ-ಯಶವಂತಪುರ-ಮೇಖ್ರಿ ವೃತ್ತ-ಹಲಸೂರು ಕೆರೆ-ಹಳೇ ಮದರಾಸು ರಸ್ತೆ-ಕೆ.ಆರ್.ಪುರ ಕಾರಿಡಾರ್‌ಗೆ 3,240 ಕೋಟಿ ರೂ., ಏರ್‌ಪೋರ್ಟ್‌ಗೆ ಎರಡು ಪರ್ಯಾಯ ರಸ್ತೆ ಮೂಲಕ ಕೈಗೆತ್ತಿಕೊಳ್ಳಲಿರುವ ಎಲಿವೇಟೆಡ್ ಕಾರಿಡಾರ್‌ಗೆ ತಲಾ 1,800 ಕೋಟಿ ರೂ. (ತಲಾ 15 ಕಿ.ಮೀ.), ಮಾರೇನಹಳ್ಳಿ-ರಾಗಿಗುಡ್ಡದಿಂದ ಕನಕಪುರ ರಸ್ತೆಯ ನೈಸ್ ಜಂಕ್ಷನ್‌ವರೆಗಿನ 10.5 ಕಿ.ಮೀ. ಉದ್ದ ಕಾರಿಡಾರ್‌ಗೆ 1,260 ಕೋಟಿ ರೂ. ಹಾಗೂ ಹಳೇ ಮದರಾಸು ರಸ್ತೆಯಿಂದ ಇಂದಿರಾನಗರ ಮಾರ್ಗವಾಗಿ ಸಿಲ್ಕ್ ಬೋರ್ಡ್‌ವರೆಗಿನ 10 ಕಿ.ಮೀ. ಉದ್ದದ ಕಾರಿಡಾರ್‌ಗೆ 1,200 ಕೋಟಿ ರೂ. ವೆಚ್ಚವಾಗುವುದೆಂದು ವರದಿ ಸಿದ್ಧಪಡಿಸಿರುವ ದಿಲ್ಲಿ ಮೂಲದ ಕಂಪನಿಯು ಲೆಕ್ಕಚಾರ ಮಾಡಿದೆ.

10 ಕಾಮಗಾರಿಗಳ ಡಿಪಿಆರ್‌ಗೆ ಟೆಂಡರ್:

ಸಿಬಿಸಿಟಿಎಂಐಪಿ ಕಾರ್ಯಸಾಧ್ಯತಾ ವರದಿ ಆಧರಿಸಿ 20 ಕಾಮಗಾರಿಗಳ ಪೈಕಿ ಮೊದಲ ಹಂತದಲ್ಲಿ 10 ಎಲಿವೇಟೆಡ್ ಕಾರಿಡಾರ್ ಅನುಷ್ಠಾನಕ್ಕೆ ವಿಸ್ತೃತ ಯೊಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಸಂಬಂಧ ಕೆಲ ದಿನಗಳ ಹಿಂದೆ ಪಾಲಿಕೆಯು ಟೆಂಡರ್ ಆಹ್ವಾನಿಸಿದೆ. ಮುಂದಿನ ಬಿಬಿಎಂಪಿ ಬಜೆಟ್‌ನಲ್ಲಿ ಈ ಕಾರಿಡಾರ್‌ಗಳನ್ನು ಸೇರ್ಪಡೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ರಿಂಗ್ ರಸ್ತೆ ಸೇರಿ ಹೊರ ವಲಯದಲ್ಲಿನ ಜನರು ಒಂದು ಬದಿಯಿಂದ ಇನ್ನೊಂದು ಭಾಗಕ್ಕೆ ಸುಲಭವಾಗಿ ಹಾಗೂ ಕ್ಷಿಪ್ರವಾಗಿ ಸಂಚರಿಸಲು ಈ ಕಾರಿಡಾರ್ ಅಗತ್ಯವಿದೆ ಎಂದು ಪಾಲಿಕೆ ಪ್ರತಿಪಾದಿಸಿದೆ.

ಉದ್ದೇಶಿತ ಕಾರಿಡಾರ್ ಉದ್ದ (ಕಿ.ಮೀ.):

ಎಲಿವೇಟೆಡ್/ಅಂಡರ್‌ಪಾಸ್ 109.5

ಎರಡು ಟನಲ್ ಕಾರಿಡಾರ್ 46

2 ಡಬಲ್ ಡೆಕ್ಕರ್ ಕಾರಿಡಾರ್ 15.2

ಒಟ್ಟು ಕಾರಿಡಾರ್‌ಗಳ ಉದ್ದ 170.7