ಜಿಲ್ಲೆ

ಮೈಸೂರು ವಿಶ್ವವಿದ್ಯಾಲಯದಲ್ಲಿ 55 ಕೋಟಿ ರೂ. ದುರ್ಬಳಕೆ: ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ 55 ಕೋಟಿ ರೂ. ದುರ್ಬಳಕೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.


ಮೈವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಆದೇಶ ಹೊರಡಿಸಿದ್ದು, ವಿಚಾರಣೆ ಮಾಡಿ ಎರಡು ತಿಂಗಳಿನಲ್ಲಿ ವರದಿ ನೀಡಲು ಸೂಚಿಸಲಾಗಿದೆ. ನಿವೃತ್ತ ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶರಾದ ಬಸವರಾಜ ಶಿವಪ್ಪ ತಡಹಲ್ ಈ ಸಮಿತಿಯ ಚೇರ್ಮನ್, ರಾಜ್ಯ ಲೆಕ್ಕ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಕ್ಯಾ.ಟಿ.ವೇಣುಗೋಪಾಲ್ ರೆಡ್ಡಿ ಸದಸ್ಯರಾಗಿದ್ದಾರೆ.


ರಾಜ್ಯ ಲೆಕ್ಕಪತ್ರ ಇಲಾಖೆ ಮತ್ತು ಹಣಕಾಸು ಇಲಾಖೆ ಆಡಿಟ್ ವರದಿ ಪ್ರಕಾರ 55 ಕೋಟಿ ರೂ. ದುರುಪಯೋಗ ಆಗಿದೆ. ಈ ಅಕ್ರಮದ ಕುರಿತು ರಾಜ್ಯ ಲೆಕ್ಕಪತ್ರ ಇಲಾಖೆಯ ಪರಿಶೀಲನೆ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ವರದಿ, ಹಣಕಾಸು ಇಲಾಖೆ ಪತ್ರ ಮತ್ತು ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಿರುವ ಆಪಾದಿತ ಅಕ್ರಮಗಳ ವಿವರಗಳ ಆಧಾರದ ಮೇಲೆ ರಾಜ್ಯಪಾಲರು ಈ ಕ್ರಮಕ್ಕೆ ತೆಗೆದುಕೊಂಡಿದ್ದಾರೆ.


ಹಣ ದುರುಪಯೋಗ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಲ್ಲಿಸಿದ ವ್ಯಕ್ತಿಗಳ ಪಟ್ಟಿಯು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ, ನಿವೃತ್ತರಾಗಿರುವ ಮತ್ತು ಇತರ ವಿಶ್ವವಿದ್ಯಾಲಯಗಳಲ್ಲಿ ನೇಮಕಗೊಂಡ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡಿದೆ. ಜತೆಗೆ ಈ ಹಿಂದೆ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದ ಖಾಸಗಿ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ.


ಯಾರ ಅವಧಿಯಲ್ಲಿ ಹಣ ದುರ್ಬಳಕೆಯಾಗಿದೆ ಎಂಬ ಪಟ್ಟಿಯನ್ನೂ ಮಾಡಲಾಗಿದ್ದು, ಅದರಲ್ಲಿ ಪ್ರಭಾರ ಕುಲಪತಿಯಾಗಿದ್ದ ಪ್ರೊ.ಡಿ.ಎ.ಮಾನೆ, ಪ್ರೊ.ಸಿ.ಬಸವರಾಜು, ಡಾ.ನಿಂಗಮ್ಮ ಬೆತ್ಸೂರು, ಪ್ರೊ.ಟಿ.ಕೆ.ಉಮೇಶ್, ಪ್ರೊ.ಆಯಿಷಾ ಶರೀಫ್ ಹಾಗೂ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವರಾಗಿದ್ದ ಪ್ರೊ.ಆರ್.ರಾಜಣ್ಣ, ಡಿ.ಭಾರತಿ (ಕೆಎಎಸ್), ಪ್ರೊ.ಲಿಂಗರಾಜ್ ಗಾಂಧಿ, ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿಯಾಗಿದ್ದ ಪ್ರೊ.ಬಿ.ಮಹಾದೇವಪ್ಪ, ಪ್ರೊ.ಟಿ.ದೇವರಾಜು, ಕುಲಪತಿಯ ವಿಶೇಷಾಧಿಕಾರಿ ಚೇತನ್ ಅವರ ಹೆಸರು ಇದೆ.


ವಿಚಾರಣಾ ಸಮಿತಿಯು ಹಣಕಾಸು ಇಲಾಖೆ ಹಾಗೂ ಲೆಕ್ಕಪತ್ರ ಇಲಾಖೆ ನೀಡಿರುವ ಆಡಿಟ್ ವರದಿ ಅನ್ವಯ ಹಣ ದುರುಪಯೋಗ ಸಂಬಂಧದ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಬೇಕು. ಈ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.