ಜಿಲ್ಲೆ

ಗ್ಯಾಸ್ ರೀಫಿಲ್ಲಿಂಗ್ ದಂಧೆ ವಿರುದ್ಧ ದೂರು

ರೇಷ್ಮೆ ನಗರ ಡೆಸ್ಕ್

ಕನಕಪುರ: ಸಾತನೂರು ಹೋಬಳಿ ಹರಿಹರ ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ಸಂಬಂಧಿಸಿದಂತೆ ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ, 22 ಸಿಲಿಂಡರ್ ವಶಪಡಿಸಿಕೊಂಡು, ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಇಟ್ಟಿಗೆ ಕಾರ್ಖಾನೆಯಲ್ಲಿ ಎಗ್ಗಿಲ್ಲದೆ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೆಯುತ್ತಿದೆ ಎಂದು ಜೂ.14ರಂದು ‘ಗ್ಯಾಸ್ ರೀಫಿಲ್ಲಿಂಗ್ ಮಾಫಿಯಾ’ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು.

ವರದಿ ಬೆನ್ನಲ್ಲೆ ಎಚ್ಚೆತ್ತ ಆಹಾರ ಇಲಾಖೆಯ ನಿರೀಕ್ಷಕ ಮನೋಹರ್ ಸ್ಥಳ ಪರಿಶೀಲನೆ ನಡೆಸಿದ್ದು, ಕಾರ್ಖಾನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ವಿವಿಧ ಕಂಪನಿಗಳ ಒಟ್ಟು 22 ಸಿಲಿಂಡರ್ ವಶಕ್ಕೆ ಪಡೆದು, ಜಮೀನಿನ ಮಾಲೀಕ ನಾಗೇಶ್ ಹಾಗೂ ಕಾರ್ಖಾನೆಯಲ್ಲಿ ಗ್ಯಾಸ್ ದಾಸ್ತಾನು ಮಾಡಿರುವ ಆರೋಪದಲ್ಲಿ ಭೋಜ ಅಲಿಯಾಸ್ ಈರೇಗೌಡ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.

ರೀಫಿಲ್ಲಿಂಗ್ ದಂಧೆಯನ್ನು ‘ವಿಜಯವಾಣಿ’ ಬಯಲಿಗೆಳೆದಾಗ ಆಹಾರ ಇಲಾಖೆ ದೂರಿನ ಮೇರೆಗೆ ಪೊಲೀಸರು ನಾಮ್ ಕೇ ವಾಸ್ತೆಗೆಂಬಂತೆ ಎಫ್‌ಐಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು. ಇನ್ನಾದರೂ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮವಹಿಸಬೇಕು ಎಂದು ದಾಳಿ ವೇಳೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಆಗ್ರಹಿಸಿದರು.

ಗೃಹಬಳಕೆಯ ಸಿಲಿಂಡರ್‌ಗಳನ್ನು ಇವರಿಗೆ ಯಾರು ಸರಬರಾಜು ಮಾಡುತ್ತಿದ್ದಾರೆ? ಎನ್ನುವ ಮುಖ್ಯ ಪ್ರಶ್ನೆ ಕಾಡುತ್ತಿದೆ. ಹಾಗಾಗಿ ಸರಬರಾಜು ಮಾಡುವವರನ್ನು ವಶಕ್ಕೆ ಪಡೆದು, ಯಾವ ಏಜೆನ್ಸಿಯವರು ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಮನೆಬಳಕೆ ಗ್ಯಾಸ್‌ಗಳು ಲೀಕ್? : ಗ್ಯಾಸ್ ಸಿಲಿಂಡರ್ ಏಜೆನ್ಸಿ ಗ್ರಾಹಕರಿಗೆ ಸರಬರಾಜು ಮಾಡುವ ಸಿಲಿಂಡರ್‌ಗಳ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಗ್ಯಾಸ್ ಲೀಕ್ ಆಗುವ ಹಾಗೂ ವಾಸನೆ ಬರುವ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ವಾಷರ್ ಹೊಗಿರಬಹುದು ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ. ರೀಫಿಲ್ಲಿಂಗ್ ದಂಧೆಯಿಂದಲೇ ಸಿಲಿಂಡರ್ ಲೀಕ್ ಆಗುತ್ತಿವೆ. ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಜನರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಪ್ರಾಧಿಕಾರಕ್ಕೆ ದೂರು : ಹರಿಹರ ದೊಡ್ಡಕೆರೆ ಇಟ್ಟಿಗೆ ಕಾರ್ಖಾನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಫಿಯಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಹರಿಹರ ಸ್ವಾಮಿ ವಿಡಿಯೋ ಹಾಗೂ ಛಾಯಾಚಿತ್ರಗಳ ಸಮೇತ ಜೂ.6ರಂದು ಸಾತನೂರು ಠಾಣೆಗೆ ದೂರು ದಾಖಲಿಸಲು ಮುಂದಾದಾಗ, ಠಾಣೆಯ ಪೇದೆ ಈ ವಿಚಾರನ್ನು ದೊಡ್ಡದು ಮಾಡುವುದು ಬೇಡ, ನಮ್ಮ ಹಂತದಲ್ಲಿಯೇ ಬಗೆಹರಿಸಿಕೊಳ್ಳೋಣ ಎಂದಿದ್ದರು ಎನ್ನಲಾಗಿದ್ದು, ಈ ಬಗ್ಗೆ ಪೊಲೀಸ್ ಪ್ರಾಧಿಕಾರಕ್ಕೆ ಹರಿಹರಸ್ವಾಮಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.