* ಚನ್ನಪಟ್ಟಣ ಬಸ್ ನಿಲ್ದಾಣ ಕಾಮಗಾರಿಗೆ ಗ್ರಹಣ
* ಗುತ್ತಿಗೆದಾರರ ಕಾನೂನು ಹೋರಾಟ
ಗಂಗಾಧರ್ ಬೈರಾಪಟ್ಟಣ ರಾಮನಗರ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚನ್ನಪಟ್ಟಣ ಹೃದಯ ಭಾಗದಲ್ಲಿ ಸುಂದರ ಬಹುಮಹಡಿ ಕಟ್ಟಡವೊಂದು ನಿರ್ಮಾಣಗೊಂಡು ಎಲ್ಲರ ಹುಬ್ಬೇರುವಂತೆ ಮಾಡಬೇಕಿತ್ತು.
ಜಾಗಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಸಿಲುಕಿ ಇಡೀ ಕಾಮಗಾರಿಯೇ ಹಳ್ಳ ಹಿಡಿದ ಕಾರಣ ಈಗ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದಂಡ ಪಾವತಿ ಸಂಕಷ್ಟ ಎದುರಾಗಿದೆ. ಆದರೆ ಇದು ಸಣ್ಣ ಮೊತ್ತವಂತೂ ಅಲ್ಲ, ಸುಮಾರು 54 ಕೋಟಿ ರೂ. ಪರಿಹಾರವನ್ನು ಕೊಡಬೇಕಾದರೆ ಆರ್ಥಿಕ ಹೊಡೆತಕ್ಕೆ ಸಿಲುಕಿ, ಕಟ್ಟಡವೂ ನಿರ್ಮಾಣಗೊಳ್ಳದೆ, ಈಗ ಗುತ್ತಿಗೆದಾರರ ಕಾನೂನು ಹೋರಾಟದ ಅಡಕತ್ತರಿಯಲ್ಲಿ ಪ್ರಾಧಿಕಾರ ಸಿಲುಕಿದೆ.
ಜಿಲ್ಲೆಯ ಚನ್ನಪಟ್ಟಣ ನಗರದ ಬೆಂಗಳೂರು - ಮೈಸೂರು ಹೆದ್ದಾರಿಯ ಬದಿಯಲ್ಲಿ ಹೈಟೆಕ್ ಖಾಸಗಿ ಬಸ್ ಟರ್ಮಿನಲ್ ನಿರ್ಮಿಸಲು ರಾಮನಗರ- ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಜಂಟಿಯಾಗಿ ಯೋಜನೆಯನ್ನು ರೂಪಿಸಿತ್ತು. 2013 ರಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಯಿತು. ಪ್ರಾಧಿಕಾರದ ಹಣದಲ್ಲಿ ಸುಮಾರು 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7 ಅಂತಸ್ತಿನ ಹಡಗು ಮಾದರಿಯ ಬಸ್ ನಿಲ್ದಾಣ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಇಲ್ಲಿನ ಜಾಗಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಆರಂಭಗೊಂಡ ಹಿನ್ನೆಲೆಯಲ್ಲಿ ಕಾಮಗಾರಿಗಾಗಿ ಹಳ್ಳ ತೋಡಿದ್ದು ಬಿಟ್ಟರೆ, ಉಳಿದಂತೆ ಎಲ್ಲವೂ ಹಳ್ಳವೇ ಹಿಡಿಯಿತು.
2013ರಲ್ಲಿ ಮುನ್ನೆಲೆಗೆ ಬಂದ ಮಹತ್ವಾಕಾಂಕ್ಷೆಯ ಚನ್ನಪಟ್ಟಣದ ಖಾಸಗಿ ಬಸ್ ಟರ್ಮಿನಲ್ ಕಾಮಗಾರಿ ಅನುದಾನದ ಕೊರತೆ, ಕಾನೂನು ವ್ಯಾಜ್ಯ, ಪ್ರಾಧಿಕಾರದ ಬಹುಕೋಟಿ ಹಗರಣ ಸೇರಿ ಹಲವು ಕಾರಣಗಳಿಂದ ಈ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿಯುವಂತಾಯಿತು.
ಕಾಮಗಾರಿ ಗುತ್ತಿಗೆ ಪಡೆದ ಕೆಎಂವಿ ಪ್ರಾಜೆಕ್ಟ್ ಲಿಮಿಟೆಡ್ ಬೃಹತ್ ಕಟ್ಟಡ ಕಾಮಗಾರಿಯನ್ನು ಆರಂಭದಲ್ಲಿ ಅತಿ ಉತ್ಸಾಹದಲ್ಲಿ ಆರಂಭಿಸಿತ್ತು. ಕಾಮಗಾರಿಯ ಅಡಿಪಾಯಕ್ಕಾಗಿ ಮಣ್ಣು ಎತ್ತಿದ್ದು, ಕಾಮಗಾರಿಗೆ ಗ್ರಹಣ ಹಿಡಿದದ್ದನ್ನು ಅರಿತು ಕೆಲಸವನ್ನು ಅಷ್ಟಕ್ಕೆ ನಿಲ್ಲಿಸಿತ್ತು. ಕಾಮಗಾರಿ ಆರಂಭದ ಹಣ ಪ್ರಾಧಿಕಾರದಿಂದ ಬರದ ಕಾರಣ ಹಣ ಕೊಡಿಸುವಂತೆ ಗುತ್ತಿಗೆ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು. ಅದರಂತೆ 2022ರ ಆಗಸ್ಟ್‌ನಲ್ಲಿ ಗುತ್ತಿಗೆ ಸಂಸ್ಥೆಗೆ 4.74 ಕೋಟಿ ರೂ. ಭರಸುವಂತೆ ನ್ಯಾಯಾಲಯ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಆದರೆ, ಆರ್ಥಿಕ ಸಂಕಷ್ಟದಲ್ಲಿರುವ ಪ್ರಾಧಿಕಾರಕ್ಕೆ ಆದೇಶ ಪಾಲನೆ ಸಾಧ್ಯವಾಗದ ಕಾರಣ, 4.74 ಕೋಟಿ ರೂ. ಇದ್ದ ಪರಿಹಾರ ಮೊತ್ತ ಈಗ 53.43 ಕೋಟಿ ರೂ, ಏರಿಕೆ ಆಗಿದೆ. ಈ ಪರಿಹಾರ ಮೊತ್ತವನ್ನು ಕೊಡಿಸಿಕೊಡುವಂತೆ ಗುತ್ತಿಗೆದಾರರು ಮಧ್ಯಸ್ಥಿಕೆ ಕೇಂದ್ರದ ಮೊರೆ ಹೋಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಪ್ರಾಧಿಕಾರ ಆರ್ಥಿಕವಾಗಿ ಸಂಪೂರ್ಣವಾಗಿ ಬಲ ಹೀನವಾಗಿದೆ. ಪ್ರಾಧಿಕಾರ ನಿರ್ಮಾಣ ಮಾಡಿರುವ ಕೆಲವು ಬಡಾವಣೆಗಳಲ್ಲಿ ಇರುವ ಮಾರಾಟವಾಗದ ನಿವೇಶನಗಳನ್ನು ಹರಾಜಿಗೆ ಇಟ್ಟರೂ ಪರಿಹಾರ ಮೊತ್ತವನ್ನು ಪಾವತಿ ಮಾಡುವಷ್ಟು ಹಣ ದೊರೆಯುವುದು ಅನುಮಾನ. ಕಳೆದ 10 ವರ್ಷಗಳ ಹಿಂದೆ ನಡೆದ 16.90 ಕೋಟಿ ರೂ. ಹಗರಣದ ಮೊತ್ತ ಇವರ ಕೈಸೇರಿದರೂ ಪರಿಹಾರ ಕೊಡಲು ಸಾಲದು.
ಸದ್ಯಕ್ಕೆ ಆರ್ಥಿಕ ಚೈತನ್ಯ ಪಡೆದುಕೊಳ್ಳಲು ಪ್ರಾಧಿಕಾರಕ್ಕೆ ಬಳಿ ಯಾವುದೇ ಹೊಸ ಯೋಜನೆಯೂ ಇಲ್ಲ. ಇತ್ತೀಚೆಗಷ್ಟೇ ವಿವಾದಕ್ಕೆ ಸಿಲುಕಿದ್ದ ಪ್ರಾಧಿಕಾರದ ಮೂರು ಲೇಔಟ್‌ಗಳ ಕಾನೂನು ತೊಡಕನ್ನು ಪ್ರಾಧಿಕಾರ ನಿವಾರಿಸಿಕೊಂಡಿದೆ. ಇದರ ಹೊರತಾಗಿಯೂ ಪ್ರಾಧಿಕಾರಕ್ಕೆ ಶಕ್ತಿ ತುಂಬುವ ಹಾಗೂ ಈಗ ಎದುರಿಸುತ್ತಿರುವ ಬೃಹತ್ ಪರಿಹಾರ ಮೊತ್ತ ಪ್ರಕರಣದಿಂದ ಹೊರ ಬರಲು ನಗರಾಭಿವೃದ್ಧಿ ಇಲಾಖೆ ನೆರವು ನೀಡಬೇಕು. ಈ ಮೂಲಕ ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ರಾಮನಗರಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆ ಮಾಡಬೇಕಿದೆ. ಇಲ್ಲವಾದರೆ ಇಡೀ ಪ್ರಾಧಿಕಾರಕ್ಕೆ ಬೀಗ ಜಡಿಯುವ ದಿನಗಳು ದೂರ ಉಳಿದಿಲ್ಲ.
ಚನ್ನಪಟ್ಟಣ ಖಾಸಗಿ ಬಸ್ ಟರ್ಮಿನಲ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಸದ್ಯದ ಮಟ್ಟಿಗೆ ಪ್ರಾಧಿಕಾರ ಆರ್ಥಿಕವಾಗಿ ಶಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಾಧಿಕಾರದ ನೆರವಿಗೆ ಧಾವಿಸಬೇಕು. ಈ ನಿಟ್ಟಿನಲ್ಲಿ ಡಿಸಿಎಂ, ಸಿಎಂ ಎಲ್ಲರಿಗೂ ಶಾಸಕರ ಜತೆಗೂಡಿ ಮನವಿ ಮಾಡುತ್ತೇವೆ.ಎ.ಬಿ.ಚೇತನ್ ಕುಮಾರ್, ಅಧ್ಯಕ್ಷ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ