ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 525 ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದು, ಐವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತಪಟ್ಟವರಲ್ಲಿ ಇಬ್ಬರು ಮಂಗಳೂರು ನಿವಾಸಿಗಳು. ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯದಿಂದ ತಲಾ ಓರ್ವರು ಮೃತಪಟ್ಟಿದ್ದಾರೆ. ಮೃತ ಐವರಲ್ಲಿ ಇಬ್ಬರು ಮಹಿಳೆಯರು. ಕರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 754 ಮಂದಿ ಇಂದು ಗುಣಮುಖವಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಕರೊನಾ ಸೋಂಕಿಗೆ ಒಳಗಾದವರು 81,013. ಗುಣವಾದವರು ಒಟ್ಟು 73,010.
ಒಂದೇ ಕಡೆ ಅಧಿಕ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಮೂರು ಕಂಟೇನ್ಮೆಂಟ್ ಜೋನ್‌ಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಇದರಲ್ಲಿ 2 ಮಂಗಳೂರು ಮತ್ತು ಒಂದು ಬೆಳ್ತಂಗಡಿಯಲ್ಲಿದೆ. ಕಾಸರಗೋಡು ಜಿಲ್ಲೆಯ 454 ಮಂದಿ ಸೇರಿ ಕೇರಳದಲ್ಲಿ ಮಂಗಳವಾರ 15,567ಮಂದಿಗೆ ಕೋವಿಡ್-19 ಬಾಧಿಸಿದೆ.
ಮತ್ತೆ ಐವರಲ್ಲಿ ಬ್ಲ್ಯಾಕ್ ಫಂಗಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸ ಐದು ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ದೃಢಪಟ್ಟಿದೆ. ದೃಢಪಟ್ಟವರು ಬೆಂಗಳೂರು, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ತಲಾ ಓರ್ವರು.
ಜಿಲ್ಲೆಯಲ್ಲಿ ಇದುವರೆಗೆ 54 ಬ್ಲ್ಯಾಕ್‌ಫಂಗಸ್ ಸಕ್ರಿಯ ಪ್ರಕರಣಗಳಿವೆ. ಈವರೆಗೆ ಏಳು ಮಂದಿ ಸಾವನ್ನಪ್ಪಿದ್ದು, ಇವರಲ್ಲಿ ಇಬ್ಬರು ಜಿಲ್ಲೆಯವರು, ಐವರು ಹೊರ ಜಿಲ್ಲೆಯವರು.
ಔಷಧ ಪೂರೈಕೆ: ಜಿಲ್ಲೆಗೆ ಬ್ಲ್ಯಾಕ್ ಪಂಗಸ್ ಔಷಧ ಮಂಗಳವಾರ ಪೂರೈಕೆಯಾಗಿದ್ದು, ಜಿಲ್ಲಾಡಳಿತ ಮತ್ತು ಸೋಂಕಿತ ವ್ಯಕ್ತಿಗಳ ಕುಟುಂಬ ಸದಸ್ಯರು ತುಸು ನಿರಾಳವಾಗಿದ್ದಾರೆ. ಈ ರೋಗ ಚಿಕಿತ್ಸೆಯಲ್ಲಿ ಬಳಸುವ 170 ವಯಲ್ ‘ಆಂಪೋಟೆರಿಸಿನ್- ಬಿ’ ಔಷಧ ಸರಬರಾಜು ಆಗಿದೆ.
ಇಂದು ಕೋವಿಶೀಲ್ಡ್ ಲಸಿಕೆ ಲಭ್ಯ: ಮಂಗಳೂರು: ಜೂ.9ರಂದು ದ.ಕ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆನ್‌ಲೈನ್ ನೋಂದಣಿ ಮಾಡಿ ಅಪಾಯಿಂಟ್ಮೆಂಟ್ ಶೆಡ್ಯೂಲ್ ಮಾಡಿಕೊಂಡವರಿಗೆ ಮಾತ್ರ ಲಸಿಕೆ ನೀಡಲಾಗುವುದು.
ಮಂಗಳೂರಿನ 10 ನಗರ ಆರೋಗ್ಯ ಕೇಂದ್ರ, ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರ, ಬಂಟ್ವಾಳ ಮತ್ತು ಪುತ್ತೂರು ನಗರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡವರು ಅಪಾಯಿಂಟ್ಮೆಂಟ್ ಶೆಡ್ಯೂಲ್ ಮಾಡಿಕೊಂಡು ಲಸಿಕಾ ಶಿಬಿರಕ್ಕೆ ಹಾಜರಾಗಬಹುದು. ಈಗಾಗಲೇ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆಯಲು 84 ದಿನಗಳನ್ನು ಪೂರೈಸಿದವರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ಲಭ್ಯತೆ ಇರುವಾಗ ಪಡೆಯಬಹುದು. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ 2ನೇ ಡೋಸ್ ಲಭ್ಯವಿದ್ದು, ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.