ಮೈಸೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಯ ಕೆಲಸದಲ್ಲಿ ತೊಡಗಿರುವ 52 ಸಾವಿರ ಪೌರ ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂ ಮಾಡಬೇಕು ಎಂದು ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕ ಮಹಾಸಂಘ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.
ಬಿಬಿಎಂಪಿ ಸೇರಿ 52 ಸಾವಿರ ಪೌರಕಾರ್ಮಿಕರು, 11,600 ಕಸ ಸಾಗಣೆ ಮಾಡುವ ವಾಹನ ಚಾಲಕರು ಮತ್ತು ಕ್ಲೀನರ್ಸ್, 544 ಒಳಚರಂಡಿ ಕಾರ್ಮಿಕರು, 15 ರಿಂದ 20 ವರ್ಷಗಳಿಂದ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶೋಷಣೆಗೆ ಒಳಗಾಗಿದ್ದಾರೆ ಎಂದು ಸಂಘದ ಅಧ್ಯಕ್ಷರೂ ಆದ ಮಾಜಿ ಮೇಯರ್ ನಾರಾಯಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರೇ ಪೌರಕಾರ್ಮಿಕರಿಗೆ ಇದ್ದ ಹೊರಗುತ್ತಿಗೆ ಪದ್ಧತಿ ರದ್ದು ಮಾಡಿ ನೇರ ವೇತನ ಜಾರಿಗೆ ತಂದಿದ್ದಾರೆ. ಆದರೆ ಲೋಡರ್ಸ್, ಕ್ಲೀನರ್ಸ್, ವಾಹನ ಚಾಲಕರು, ಒಳಚರಂಡಿ ಕಾರ್ಮಿಕರು ಹೊರಗುತ್ತಿಗೆ ಪದ್ಧತಿಯಲ್ಲೇ ಮುಂದುವರಿದಿದ್ದಾರೆ. ಆದ್ದರಿಂದ ಅವರನ್ನು ಕಾಯಂಗೊಳಿಸಬೇಕು ಎಂದು ಕೋರಿದರು.
2022ರ ಜುಲೈ 1ರಂದು ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು, ಎಲ್ಲ್ಲ ನೇರ ಪಾವತಿ ಪೌರಕಾರ್ಮಿಕರನ್ನು ಕಾಯಂ ಮಾಡುವುದಲ್ಲದೆ ಹೊರಗುತ್ತಿಗೆಯಲ್ಲಿ ಇರುವ ಲೋಡರ್ಸ್, ಕ್ಲೀನರ್ಸ್, ವಾಹನ ಚಾಲಕರು, ಒಳಚರಂಡಿ ಕಾರ್ಮಿಕರನ್ನೂ ಇನ್ನು ಮೂರು ತಿಂಗಳಲ್ಲಿ ನೇರ ಪಾವತಿ ವ್ಯವಸ್ಥೆಗೆ ತರುವುದಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ ಅವರು ಘೋಷಿಸಿದ ಆದೇಶದಿಂದ ಕೆಲವರು ಮಾತ್ರ ಕಾಯಂ ಆಗಿ ಉಳಿದವರು ಗೊಂದಲದಲ್ಲಿ ಇದ್ದಾರೆ ಎಂದು ದೂರಿದರು.
ಮಹಾಸಂಘದ ಉಪಾಧ್ಯಕ್ಷ ಆರ್.ಶಿವ, ಕೊಳಚೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಆರ್.ದಾಸ್, ಖಜಾಂಚಿ ಯತಿರಾಜು, ಟಿ.ರಾಜು ಇದ್ದರು.