ಬೆಂಗಳೂರು: ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಿದರು.
ಉದ್ಯೋಗ ಸೃಷ್ಟಿ, ಯುವಜನರ ಸಬಲೀಕರಣ ಮತ್ತು ದೇಶ ನಿಮಾರ್ಣದಲ್ಲಿ ಅವರ ಪಾಲ್ಗೊಳ್ಳುವಿಕೆಗಾಗಿ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವಲ್ಲಿ ರೋಜ್ಗಾರ್ ಮೇಳವು ಮಹತ್ವದ ಪಾತ್ರ ವಹಿಸುತ್ತದೆ. ದೇಶಾದ್ಯಂತ ರೋಜ್ಗಾರ್ ಮೇಳದ ಮೂಲಕ ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ನೀಡಲಾಗಿದೆ.
16ನೇ ರೋಜ್ಗಾರ್ ಮೇಳವನ್ನು ರಾಜ್ಯದ ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿ ದೇಶಾದ್ಯಂತ 47 ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ರೋಜ್ಗಾರ್ ಮೇಳದಲ್ಲಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ವಿಕಸಿತ ಭಾರತ 2047 ರ ಗುರಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಬೇಕು. ತಮ್ಮ ಇಲಾಖೆಗಳು ಬೆಳೆಯಲು ಮತ್ತು ದೇಶದ ಅಭಿವೃದ್ಧಿಯಾಗಲು ತಮ್ಮ ಜ್ಞಾನ, ಕೌಶಲ ಮತ್ತು ಕಠಿಣ ಪರಿಶ್ರಮವನ್ನು ಬಳಸಬೇಕೆಂದು ತಿಳಿಸಿದರು.
ನೈರುತ್ಯ ರೈಲ್ವೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ ಮಾಥುರ್, ಹಿರಿಯ ವಿಭಾಗೀಯ ಅಧಿಕಾರಿ ಉಮಾ ಶಮಾರ್ ಮತ್ತು ವಿವಿಧ ಕೇಂದ್ರ ಸರ್ಕಾರಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
185 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ
ಬೆಂಗಳೂರಿನಲ್ಲಿ ನಡೆದ ರೋಜ್ಗಾರ್ ಮೇಳದಲ್ಲಿ ರೈಲ್ವೆಯಲ್ಲಿ 61, ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ 46, ಬಿಎಎಸ್ಎಫ್ ಮತ್ತು ಸಿಐಎಸ್ಎ್ನಲ್ಲಿ 14, ಅಂಚೆ ಇಲಾಖೆಯಲ್ಲಿ 12, ಆದಾಯ ತೆರಿಗೆ ಇಲಾಖೆ 7, ಆಯುಷ್ನಲ್ಲಿ 2, ನಿಮ್ಹಾನ್ಸ್ನಲ್ಲಿ 10, ಭಾರತೀಯ ಪುರಾತತ್ವ ಇಲಾಖೆ 11, ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ 9 ಮತ್ತು ಕೇಂದ್ರ ತೆರಿಗೆ (ಸಿಜಿಎಸ್)ಸಂಸ್ಥೆಯಲ್ಲಿ 13 ಅಭ್ಯರ್ಥಿಗಳು ಸೇರಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 185 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.