ಜಿಲ್ಲೆ

51 ಕ್ಷಯ ರೋಗಿಗಳ ದತ್ತು, ಪ್ರಶಂಸೆ

Bidar

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಯ ರೋಗ ಮುಕ್ತ ಭಾರತ ಕರೆಗೆ ಓಗೊಟ್ಟು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು 51 ಕ್ಷಯ ರೋಗಿಗಳನ್ನು ದತ್ತು ಪಡೆದಿರುವುದನ್ನು ಜಿಲ್ಲಾ ಆಡಳಿತ ಪ್ರಶಂಸಿಸಿದೆ.
ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನಡೆದ ವಿಶ್ವ ಕ್ಷಯ ರೋಗ ನಿರ್ಮೂಲನೆ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸ್ವಾಮಿ ಅವರಿಗೆ ಶಾಲು ಹೊದಿಸಿ ಸತ್ಕರಿಸಿದರು.
ಶಿವಯ್ಯ ಸ್ವಾಮಿ ಅವರ ಸಮಾಜ ಸೇವೆ ಮಾದರಿಯಾಗಿದೆ. ಇತರರಿಗೆ ಪ್ರೇರಣಾದಾಯಕವೂ ಆಗಿದೆ ಎಂದು ಹೇಳಿದರು.
ಶಿವಯ್ಯ ಸ್ವಾಮಿ ಅವರು ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಮೂಲಕ 51 ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಪೌಷ್ಟಿಕಾಂಶ ಹಾಗೂ ಆಹಾರ ಸಾಮಗ್ರಿ ಕಿಟ್ ಒದಗಿಸಿದ್ದರು. ಕ್ಷಯ ರೋಗ ಮುಕ್ತ ಬೀದರ್‍ಗೆ ಕೈ ಜೋಡಿಸಿದ್ದರು. ಕೋವಿಡ್ ಸಂದರ್ಭದಲ್ಲೂ ಆಹಾರ ಧಾನ್ಯ ಕಿಟ್ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಗಮನ ಸೆಳೆದಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಶರಣಯ್ಯ ಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ, ಡಾ. ಮಹೇಶ ತೊಂಡಾರೆ, ಡಾ. ಶಿವಶಂಕರ, ಡಾ. ರಾಜಶೇಖರ ಪಾಟೀಲ ಮತ್ತಿತರರು ಇದ್ದರು.