ಜಿಲ್ಲೆ

51 ಅನರ್ಹ ಫಲಾನುಭವಿಗಳ ಖಾತೆಗೆ ಹಣ ಸಂದಾಯ

ಹಾವೇರಿ: ಬೆಳೆ ಹಾನಿ ಪರಿಹಾರದಲ್ಲಿನ ಅಕ್ರಮ ಹೆಚ್ಚುತ್ತ ಸಾಗುತ್ತಿದ್ದು, ತಾಲೂಕಿನ ದೇವಗಿರಿ ಗ್ರಾಮದಲ್ಲಿ ಪರಿಹಾರ ಪಡೆದಿರುವ 198 ಫಲಾನುಭವಿಗಳಲ್ಲಿ 51 ಜನ ಅನರ್ಹರಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಮಾಜಿ ಶಾಸಕ ಶಿವರಾಜ ಸಜ್ಜನರ ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ವಿವರ ನೀಡಿದರು.

ಈಗಾಗಲೇ ಗ್ರಾಮ ಲೆಕ್ಕಾಧಿಕಾರಿ ಆನಂದ ದೇಸಾಯಿ ಎಂಬುವವರು ದೇವಗಿರಿ ಗ್ರಾಮದ ಫಲಾನುಭವಿಗಳ ಹೆಸರಿನಲ್ಲಿ ಹುಬ್ಬಳ್ಳಿ ತಾಲೂಕು ಅರಳಿಕಟ್ಟಿ ಗ್ರಾಮದವರಿಗೆ ಪರಿಹಾರ ಸಂದಾಯವಾಗಿರುವ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಹಾನಗಲ್ಲ ತಾಲೂಕು ದ್ಯಾಮನಕೊಪ್ಪ ಗ್ರಾಮದ 11ಜನರಿಗೆ ದೇವಗಿರಿ ಗ್ರಾಮದ ಜನರ ಸರ್ವೆ ನಂಬರ್​ಗಳನ್ನು ಬಳಸಿ ಪರಿಹಾರ ದಾಖಲಿಸಿರುವುದನ್ನು ಶಿವರಾಜ ಸಜ್ಜನರ ಪತ್ತೆ ಮಾಡಿದ್ದಾರೆ.

‘ಬೆಳೆಹಾನಿ ಪರಿಹಾರದಲ್ಲಿನ ಗೋಲ್ಮಾಲ್ ಜಾಲ ದೊಡ್ಡದಾಗಿದ್ದು, ಇದರಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಮಾಯಕರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿ ವಂಚಿಸಲಾಗಿದೆ. ಗೋಲ್ಮಾಲ್ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ವರದಿಗಳು ಪ್ರಕಟಗೊಂಡಿದ್ದನ್ನು ಕಂಡು ಈರಣ್ಣ ಗಿರ್ಜಿ ಎಂಬುವವರು ತಮ್ಮ ಖಾತೆಗಳಿಗೆ ಹಣ ಹಾಕಿಸಿದ ಕುರಿತು ನನಗೆ ತಿಳಿಸಿದರು. ಹೀಗಾಗಿ ಅವರನ್ನು ಕರೆತಂದು ಮಾಧ್ಯಮಗಳ ಎದುರು ಹೇಳಿಕೆ ಕೊಡಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ’ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಿಸಿದರು.

ದ್ಯಾಮನಕೊಪ್ಪ ಗ್ರಾಮದ ಈರಣ್ಣ ಗಿರ್ಜಿ ಮಾತನಾಡಿ, ‘ನನ್ನ ಖಾತೆಗೂ 73 ಸಾವಿರ ರೂ. ಜಮೆಯಾಗಿದೆ. ನಮ್ಮ ಊರಿನ 15 ಜನರ ಬ್ಯಾಂಕ್ ಖಾತೆ ಹಾಗೂ ಆಧಾರ್ ನಂಬರ್​ಗಳನ್ನು ಶಿಗ್ಗಾಂವಿಯ ದಲಾಲಿ ವ್ಯಾಪಾರಿ ಮಂಜುನಾಥ ದೊಡ್ಡಮನಿ ಎಂಬುವವರಿಗೆ ನೀಡಿದ್ದೆ. ಅವರು ಎಲ್ಲರ ಖಾತೆಗಳಿಗೆ 8.73 ಲಕ್ಷ ರೂ.ಗಳನ್ನು ಜಮೆ ಮಾಡಿಸಿದ್ದರು. ಆ ಹಣದಲ್ಲಿ 3 ಲಕ್ಷ ರೂ.ಗಳನ್ನು ವಿಠ್ಠಲ ಸಿಂಧೆ ಎಂಬುವವರ ಬ್ಯಾಂಕ್ ಖಾತೆಗೆ ನೆಫ್ಟ್ ಮಾಡಿದ್ದೇನೆ. 5.73 ಲಕ್ಷ ರೂ.ಗಳನ್ನು ಸಂತೋಷ ಮಾಳವದೆ ಎಂಬುವವರ ಕೈಯಲ್ಲಿ ಮಂಜುನಾಥ ದೊಡ್ಡಮನಿ ಸೂಚನೆಯಂತೆ ಕೊಟ್ಟಿದ್ದಾರಂತೆ’ ಎಂದು ವಿವರಿಸಿದರು.

ಜಿಪಂ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ತಾಪಂ ಸದಸ್ಯ ಸತೀಶ ಸಂದಿಮನಿ ಸುದ್ದಿಗೋಷ್ಠಿಯಲ್ಲಿದ್ದರು.