ಹುಬ್ಬಳ್ಳಿ : ರೈಲ್ವೆ ಆಸ್ತಿ, ಪ್ರಯಾಣಿಕರ ಸುರಕ್ಷತೆ ಕಾಪಾಡುವಲ್ಲಿ ನಿರತವಾಗಿರುವ ರೈಲ್ವೆ ರಕ್ಷಣೆ ಪಡೆ (ಆರ್ಪಿಎಫ್) ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ 12 ಜನ ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 51 ಮಕ್ಕಳನ್ನು ರಕ್ಷಿಸಿದೆ. ಜತೆಗೆ ಉಪಲಬ್ಧ ಕಾರ್ಯಾಚರಣೆ ಅಡಿ 3.22 ಲಕ್ಷ ರೂ. ಮೌಲ್ಯದ ಟಿಕೆಟ್ಗಳನ್ನು ವಶಪಡಿಸಿಕೊಂಡಿದೆ.
ರೈಲುಗಳಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿದ್ದ 14 ಜನರನ್ನು ಬಂಧಿಸಿ, 86,833 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. </p><p>ವಿವಿಧ ಕಾರಣಗಳಿಂದ ಮನೆ ಬಿಟ್ಟುಬಂದಿದ್ದ 51 ಮಕ್ಕಳನ್ನು ನನ್ಹೆ ಪರಿಸ್ತೆ ಕಾರ್ಯಾಚರಣೆ ಅಡಿ ರಕ್ಷಿಸಿ, ಎನ್ಜಿಒ ಹಾಗೂ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ಒಬ್ಬಳು ಮಹಿಳೆ ಸೇರಿದಂತೆ 6 ವೃದ್ಧರನ್ನು ಡಿಗ್ನಿಟಿ ಕಾರ್ಯಾಚರಣೆ ಅಡಿ ರಕ್ಷಿಸಿ, ಅವರ ಕುಟುಂಬ ಅಥವಾ ಎನ್ಜಿಒಗಳಿಗೆ ಹಸ್ತಾಂತರಿಸಲಾಗಿದೆ.
ಮಹಿಳಾ ಪ್ರಯಾಣಿಕರ ಶಕ್ತೀಕರಣ-ಮೇರಿ ಸಹೇಲಿ ಅಭಿಯಾನದ ಅಡಿ 32 ರೈಲುಗಳಲ್ಲಿ ಒಂಟಿಯಾಗಿ ಅಥವಾ ಸಂಗಾತಿ ಇಲ್ಲದೇ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಖಚಿತಪಡಿಸಲಾಯಿತು.
ವಿವಿಧ ರೈಲುಗಳಲ್ಲಿ 66 ಜನ ಬಿಟ್ಟು ಹೋದ 17.33 ಲಕ್ಷ ರೂ. ಮೌಲ್ಯದ ಲ್ಯಾಪ್ಟಾಪ್, ಆಭರಣಗಳು ಹಾಗೂ ಇನ್ನಿತರ ಮೌಲ್ಯಯುತ ವಸ್ತುಗಳನ್ನು ಆರ್ಪಿಎಫ್ ಸಿಬ್ಬಂದಿ ಸಂಬಂಧಿಸಿದ ಪ್ರಯಾಣಿಕರಿಗೆ ಹಸ್ತಾಂತರಿಸಿದರು.