ಕೊಳ್ಳೇಗಾಲ: ಜಮೀನಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷೃ ವಹಿಸಿದ್ದ ಆರೋಪಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 5 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿದೆ. ಹನೂರು ತಾಲೂಕಿನ ಬೋರೆ ಗ್ರಾಮದ ಲೇಟ್ ವಯ್ಯಪುರಿ ಕಿರೇಪಾತಿ ಮಗನಾದ ಕುಪ್ಪುಸ್ವಾಮಿ ಆರೋಪಿ ದಂಡಕ್ಕೆ ಗುರಿಯಾದವರು. ಈತ ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಮುನ್ನೆಚ್ಚರಿಕೆ ಕ್ರಮ ವಹಿಸದೆ ವಿದ್ಯುತ್ ಗೈಯ್ ವೈಯರನ್ನು ಕೆಳಗೆ ಬಿಟ್ಟಿದ್ದ. 2020 ಜು.6 ರಂದು ಮಧ್ಯಾಹ್ನ 3ಗಂಟೆಯಲ್ಲಿ ಪಕ್ಕದ ಮನೆಯ ನವಿತಾಶ್ರೀ ಎಂಬುವರು ಗೈಯ್ ವೈಯರ್ ತುಳಿದು ವಿದ್ಯುತ್ ತಗುಲಿ ಮೃತಪಟ್ಟ ಬಗ್ಗೆ ರಾಮಾಪುರ ಪೊಲೀಸರು ಕ್ರೈಂ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗೆ ದಂಡ ವಿಧಿಸಿ ಆದೇಶಿಸಿದೆ. ಮೃತರ ಪಾಲಕರಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕೋರಲಾಗಿದೆ. ಸರ್ಕಾರದ ಪರವಾಗಿ ಬಿ.ಪಿ.ಮಂಜುನಾಥ ವಾದ ಮಂಡಿಸಿದರು.