ವಿಜಯವಾಣಿ ಸುದ್ದಿಜಾಲ ಕಾರವಾರ
ಕಾಯಂ ಉಪನ್ಯಾಸಕರು, ಬಸ್, ಕ್ಯಾಂಟೀನ್ ಮುಂತಾದ ಅಗತ್ಯ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯ ಎದುರು ಶನಿವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಮಾಜಾಳಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ 500 ವಿದ್ಯಾರ್ಥಿಗಳಿದ್ದಾರೆ. ಪ್ರಾಂಶುಪಾಲರನ್ನು ಬಿಟ್ಟರೆ ಒಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಅವರೂ ಈಗ ವರ್ಗಾವಣೆಯಾಗಿ ಹೋಗುತ್ತಿದ್ದಾರೆ. 7 ಅರೆಕಾಲಿಕ ಅತಿಥಿ ಉಪನ್ಯಾಸಕರ ಮೇಲೆ ಪಾಠ, ಪ್ರವಚನಗಳು ನಡೆಯಬೇಕು. ಅರೆಕಾಲಿಕ ಉಪನ್ಯಾಸಕರಿಂದ 8 ತಾಸಿನ ಬದಲು 18 ತಾಸು ದುಡಿಸಿಕೊಳ್ಳಲಾಗುತ್ತಿದೆ. ಒತ್ತಡದ ಪರಿಣಾಮ ಅವರೂ ವಿದ್ಯಾರ್ಥಿಗಳ ಕಲಿಕಾ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇನ್ನಷ್ಟು ಒತ್ತಡ ಹೆಚ್ಚಿದಲ್ಲಿ ಅವರೂ ಕೆಲಸ ಬಿಟ್ಟು ಹೋಗಲೆತ್ನಿಸುತ್ತಿದ್ದಾರೆ. ಹಾಗಾಗಿ ಕಾಯಂ ಉಪನ್ಯಾಸಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಕಾಲೇಜ್‌ಗೆ ಬೆಳಗ್ಗೆ 7.30 ರಿಂದ 9.30 ರ ನಡುವೆ ಮೂರು ಬಸ್‌ಗಳಿವೆ. ಸುಮಾರು 300 ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಯಾಣಿಕರು ಇದೇ ಬಸ್‌ಗೆ ಹೋಗಬೇಕಿದೆ. ತೀರ ನೂಕುನುಗ್ಗಲಾಗುತ್ತಿದೆ. ಸರಿಯಾದ ಸಮಯಕ್ಕೆ ತರಗತಿಗೆ ತೆರಳಲು ಸಾಧ್ಯವಿಲ್ಲ. ಇದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಾಲೇಜ್‌ನಲ್ಲಿ ಕ್ಯಾಂಟೀನ್ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಬೆಳಗ್ಗೆ ಹೋದವರು ಸಾಯಂಕಾಲ ತನಕ ಹಸಿದುಕೊಂಡು ಇರಬೇಕಾಗಿದೆ. ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ ಮಾಡಬೇಕು. ಇನ್ನು ಪಠ್ಯ ಚಟುವಟಿಕೆ ಬಿಟ್ಟು ಕ್ರೀಡೆ ಮುಂತಾದ ಯಾವುದೇ ಪಠ್ಯೇತರ ಚಟುವಟಿಕೆಗಳೂ ನಡೆಯುವುದಿಲ್ಲ. ಕಾಲೇಜ್‌ನಲ್ಲಿ ವಿದ್ಯಾಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಪಾಲಕರಾದ ರೇಷ್ಮಾ ಕೋಲ್ವೇಕರ್, ತನುಜಾ ನಾಯ್ಕ, ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.