ಜಿಲ್ಲೆ

ಶಕ್ತಿ ಯೋಜನೆಯಡಿ ಮಹಿಳೆಯರಿಂದ 500 ಕೋಟಿ ಪಯಣ

ಮೈಸೂರು: ಶಕ್ತಿ ಯೋಜನೆಯಡಿ ಇದುವರೆಗೆ ಮಹಿಳೆಯರು 500 ಕೋಟಿ ಬಾರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಿದ್ದಾರೆ. ಇದು ದೇಶದ ಲ್ಲಿಯೇ ದೊಡ್ಡ ದಾಖಲೆಯಾಗಿದೆ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಹೇಳಿದರು.

500 ಕೋಟಿ ಬಾರಿ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಸಂಚರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ 5 ಶತಕ ಮಹಿಳಾ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ ಮಹಿಳೆಯರು ರಾತ್ರಿ ವೇಳೆಯಲ್ಲೂ ನಿರ್ಭೀತಿಯಿಂದ ಸಂಚರಿಸುವ ವಾತಾವರಣ ನಿರ್ಮಾಣ ಆಗಬೇಕು ಎಂದು ಮಹಾತ್ಮಗಾಂಧಿ ಬಯಸಿದ್ದರು. ಅವರ ಆಶಯಕ್ಕೆ ಪೂರಕವಾಗಿ ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ನಮ್ಮ ಸರ್ಕಾರ ಅನುವು ಮಾಡಿಕೊಟ್ಟಿತು. ಈ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಶಕ್ತಿ ಯೋಜನೆಯಿಂದ ಆಷಾಢ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದರು.

ಸಾರಿಗೆ ಬಸ್‌ಗಳಲ್ಲಿ ಅಂಧರಿಗೆ ಮಾರ್ಗದರ್ಶನ ನೀಡುವ ವಿಶೇಷ ಉಪಕರಣ ಅಳವಡಿಸುವ ಯೋಜನೆಗೆ ಜು.14 ರಂದು ಮ.1.30ಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನಗರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡುವರು. ಈ ವಿಶೇಷ ಉಪಕರಣವನ್ನು ನಗರದ 200 ಬಸ್‌ಗಳಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.