ಸಕಲೇಶಪುರದಲ್ಲಿ ಸಹಕಾರಿ ಕೃಷಿ ಬ್ಯಾಂಕ್ ಸಭಾಂಗಣವನ್ನು ಷಡಕ್ಷರಿ ಉದ್ಘಾಟಿಸಿದರು. ಎಚ್.ಎಚ್.ಉದಯ್, ಹಿತೈಷಿ, ಕಾಮನಹಳ್ಳಿ ಜಯರಾಜ್,ವಿಜಯಕುಮಾರ್, ಪಾಪಣ್ಣ ಮುಂತಾದವರಿದ್ದರು. 
ಜಿಲ್ಲೆ

2024ರ ಮಾರ್ಚ್ ಅಂತ್ಯಕ್ಕೆ 500 ಕೋಟಿ ರೂ. ಸಾಲ ವಿತರಣೆ

ಸಕಲೇಶಪುರ: ರೈತರಿಗೆ 2024ರ ಮಾರ್ಚ್ ಅಂತ್ಯದೊಳಗೆ 500 ಕೋಟಿ ರೂ. ಸಾಲ ವಿತರಿಸಲಾಗುವುದು ಎಂದು ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಷಡಕ್ಷರಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಭಾಂಗಣ ಉದ್ಘಾಟಿಸಿ ಮಾತನಾಡಿ ಅವರು, ಈಗಾಗಲೇ ರೈತರಿಗೆ 250 ಕೋಟಿ ಸಾಲ ವಿತರಿಸಲಾಗಿದ್ದು, ಬಹುತೇಕರಿಗೆ ಮೊದಲ ಕಂತಿನ ಹಣ ಸಂದಾಯವಾಗಿದೆ. ಎರಡನೇ ಕಂತಿನ ಹಣ ಮುಂದಿನ ಮಾರ್ಚ್ ಅಂತ್ಯದೊಳಗೆ ತಲುಪಲಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಸಾಲ ನೀಡುವ ಉದ್ದೇಶದಿಂದಲೇ ಸೃಷ್ಟಿಯಾಗಿರುವ ಭೂ ಅಭಿವೃದ್ಧಿ ಬ್ಯಾಂಕ್‌ನ ಅಳಿವು ಉಳಿವು ರೈತರ ಕೈಯಲ್ಲಿದೆ. ಬ್ಯಾಂಕ್ ನಷ್ಟದಿಂದ ಬಾಗಿಲು ಮುಚ್ಚಿದರೆ ರೈತರಿಗೆ ಸಾಲ ನೀಡಲು ಯಾವುದೇ ಬ್ಯಾಂಕ್ ಮುಂದೆ ಬರುವುದಿಲ್ಲ. ಆದ್ದರಿಂದ, ಸಾಲ ಪಡೆದವರುತಿರುವಳಿಯನ್ನು ಸಮಯಕ್ಕೆ ಸರಿಯಾಗಿ ಮಾಡಿದಲ್ಲಿ ಬ್ಯಾಂಕ್ ಅನ್ನು ಲಾಭದಡೆಗೆ ಕೊಂಡೊಯ್ಯಬಹುದಾಗಿದೆ ಎಂದರು.

ಬ್ಯಾಂಕ್‌ನ ಅಧ್ಯಕ್ಷ ಎಚ್.ಎಚ್ ಉದಯ್ ಮಾತನಾಡಿ, ಸಾಲ ಕಟ್ಟಬೇಕಿಲ್ಲ ಎಂಬ ಮನಸ್ಥಿತಿಯಿಂದ ರೈತರು ಹೊರಬರಬೇಕು. ಸ್ಥಳೀಯ ಬ್ಯಾಂಕ್‌ಗೆ ನಬಾರ್ಡ್ ಸಾಲ ನೀಡಬೇಕಾದರೆ ಶೇ.50 ರಷ್ಟು ಸಾಲ ವಸೂಲಾತಿಯಾಗಬೇಕಿದೆ. ಆದರೆ, ನಮ್ಮ ಬ್ಯಾಂಕ್ ಈವರಗೆ ಶೇ 36.ರಷ್ಟು ಸಾಲ ವಸೂಲಾತಿ ಮಾಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್‌ನ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷ ಹಿತೈಷಿ, ನಿರ್ದೇಶಕರಾದ ಕಾಮನಹಳ್ಳಿ ಜಯರಾಜ್,ವಿಜಯಕುಮಾರ್, ಪಾಪಣ್ಣ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಮುಂತಾದವರಿದ್ದರು.