ಜಿಲ್ಲೆ

50 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಉದ್ಘಾಟನೆ

ನರಗುಂದ: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಆಶಾ ಕಾರ್ಯಕರ್ತೆಯರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ಶ್ಲಾಘನೀಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪಟ್ಟಣದ ಬಾಬಾಸಾಹೇಬ ಭಾವೆ ತಾಲೂಕಾಸ್ಪತ್ರೆಯಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಲಾದ ಶುದ್ಧ ಕುಡಿಯುವ ನೀರಿನ ಘಟಕ, ಹೈಟೆಕ್ ಲ್ಯಾಬ್ ಹಾಗೂ ನೂತನ 50 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಟ್ಟಣದಲ್ಲಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ವಿುಸಲಾಗಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಆಸ್ಪತ್ರೆಯ ಆವರಣದಲ್ಲಿರುವ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದು, ಕೆಲ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲದೆ, ರೋಗಿಗಳ ಸಂಬಂಧಿಕರು ಊಟ ಮಾಡಲು ಪ್ರತ್ಯೇಕ ಭವನ ನಿರ್ವಿುಸಲಾಗಿದೆ. ನೂತನ ಕೋವಿಡ್ ಆಸ್ಪತ್ರೆಯ ಎಲ್ಲ 50 ಬೆಡ್​ಗಳಿಗೆ ಪ್ರತ್ಯೇಕ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಕರೊನಾ ಚಿಕಿತ್ಸೆಗೆಂದು ದಾಖಲಾಗುವವರಿಗೆ ಈ ತಾಲೂಕಾಸ್ಪತ್ರೆ ಸಹಕಾರಿಯಾಗಲಿದೆ’ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ಪ್ರವೀಣ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಕೊರವನವರ, ಡಾ. ಜಡೇಶ ಭದ್ರಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ವಿ. ಮೇಟಿ, ವಾಸು ಜೋಗಣ್ಣವರ, ಮೌಲಾಸಾಬ್ ಠಾಣೇದ, ಮಲ್ಲಿಕಾರ್ಜುನ ಹಿರೇಮಠ, ಎಸ್.ಬಿ. ಕೊಣ್ಣೂರ, ಮಂಜು ಮೆಣಸಗಿ, ಸಂತೋಷ ಡೊಂಬರ, ಪವಾಡೆಪ್ಪ ವಡ್ಡಿಗೇರಿ, ಬೀರಪ್ಪ ಗೋರವನಕೊಳ್ಳ, ನೀಲಕಂಠ ಮಡಿವಾಳರ, ನಿರ್ವಿುತಿ ಕೇಂದ್ರದ ಯೋಜನಾಧಿಕಾರಿ ಜಿ.ವಿ. ಶಿರೋಳ, ವಿ.ಎ. ಹಿರೇಮಠ, ಇತರರಿದ್ದರು.

ಮೊದಲು ಮಾಸ್ಕ್ ಧರಿಸು..!

ತಾಲೂಕಾಸ್ಪತ್ರೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಗೆ ಆಗಮಿಸಿದ್ದ ಪುರಸಭೆ ಮಾಜಿ ಉಪಾಧ್ಯಕ್ಷ ವಾಸು ಜೋಗಣ್ಣವರ ಮಾಸ್ಕ್ ಧರಿಸದಿರುವುದನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಗಮನಿಸಿದ ಸಚಿವ ಸಿ.ಸಿ. ಪಾಟೀಲರು ‘ವಾಸು ನೀನು ಮೊದಲು ಮಾಸ್ಕ್ ಧರಿಸು’ ಎಂದು ಎಚ್ಚರಿಸಿದರು.