ಭಾಲ್ಕಿ: ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಸೂರು ಇಲ್ಲದವರಿಗೆ ಪಕ್ಕಾ ಮನೆ ಒದಗಿಸಲಾಗುವುದು ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ತಾಲೂಕಿನ ಲಂಜವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಪಂ, ತಾಪಂ ಮತ್ತು ರಾಜೀವ ಗಾಂಧಿ ವಸತಿ ನಿಗಮ ಬೆಂಗಳೂರು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆವಾಸ್ ಪ್ಲಸ್-೨೦೨೪ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಕ್ಷೇತ್ರದಲ್ಲಿ ೫ ಸಾವಿರ ಮನೆ ಮಂಜೂರಾತಿ ಮಾಡಿಸುವುದಕ್ಕೂ ಸಾಧ್ಯವಾಗಿರಲಿಲ್ಲ. ಆದರೆ ಒಂದೇ ವರ್ಷದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕ್ಷೇತ್ರಕ್ಕೆ ೫೦ ಸಾವಿರಕ್ಕೂ ಅಧಿಕ ಮನೆಗಳನ್ನು ಮಂಜೂರಾತಿ ಮಾಡಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ನಮ್ಮ ತಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿವಿಧ ಯೋಜನೆಯಡಿ ಭಾಲ್ಕಿ ಕ್ಷೇತ್ರದಲ್ಲಿ ಇದುವರೆಗೂ ೨೫ ಸಾವಿರಕ್ಕೂ ಅಧಿಕ ಮನೆಗಳನ್ನು ಕಟ್ಟಿಸಿ ಕೊಟ್ಟು ಗುಡಿಸಲು ಮುಕ್ತ ತಾಲೂಕು ಮಾಡುತ್ತಿದ್ದಾರೆ. ನಾನು ಕೂಡ ಅದೇ ಮಾದರಿಯಲ್ಲಿ ಲೋಕಸಭಾ ಕ್ಷೇತ್ರದ ಎಲ್ಲ ತಾಲೂಕುಗಳಿಗೆ ಕೇಂದ್ರದ ವಸತಿ ಯೋಜನೆಯಡಿ ಮನೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕೇಂದ್ರದ ಪಂಚಾಯತ್ ರಾಜ್ ಸಚಿವ ಶಿವರಾಜ ಸಿಂಗ್ ಅವರಲ್ಲಿ ಹೆಚ್ಚಿನ ಮನೆ ಒದಗಿಸಲು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ರಾಧಿಕಾ ಶುಕ್ರಚಾರ್ಯ ಮುಂಗಳೆ, ಭಾತಂಬ್ರಾ ಗ್ರಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಸೀರ್ ಅಹ್ಮೇದ್, ಸದಸ್ಯ ವಿಲಾಸ ಪಾಟೀಲ್, ಯೋಜನಾಧಿಕಾರಿ ಜಗನ್ನಾಥ, ತಾಪಂ ಇಒ ಸೂರ್ಯಕಾಂತ ಬಿರಾದಾರ್, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ಮುಸ್ತಾಕ್ ಅಹ್ಮೇದ್, ಶಂಕರರಾವ ಭೋರಾಳೆ ಇತರರಿದ್ದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ್ ಸ್ವಾಗತಿಸಿದರು. ಹಣಮಂತರಾವ ಕಾರಾಮುಂಗೆ ನಿರೂಪಣೆ ಮಾಡಿದರು. ಚಂದ್ರಕಾಂತ ತಳವಾಡೆ ವಂದಿಸಿದರು.
ಮನೆ ಸಮೀಕ್ಷೆಗೆ ಆವಾಸ್-೨೦೨೪ ಆ್ಯಪ್: ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಆವಾಸ್-೨೦೨೪ ಆ್ಯಪ್ ಪರಿಚಯಿಸಲಾಗಿದ್ದು, ಇದು ಮನೆ ಮತ್ತು ನಿವೇಶನ ರಹಿತ ಫಲಾನುಭವಿಗಳ ಸಮೀಕ್ಷೆಯನ್ನು ನಡೆಸಲು ಅತ್ಯಂತ ಸಹಕಾರಿಯಾಗಲಿದೆ ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದರು. ಈ ಆ್ಯಪ್‌ನ ಸಹಾಯದಿಂದ ಕ್ಷೇತ್ರದಲ್ಲಿನ ಮನೆ ರಹಿತ ಮತ್ತು ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಸÀರ್ಕಾರದಿಂದ ಮಂಜೂರಾದ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮಾರ್ಚ್ ಅಂತ್ಯದವರೆಗೂ ಸಮೀಕ್ಷೆ ನಡೆಯಲ್ಲಿದ್ದು, ಮನೆ ಮತ್ತು ನಿವೇಶನ ಇಲ್ಲದ ಫಲಾನುಭವಿಗಳು ಈ ಆ್ಯಪ್‌ನಲ್ಲಿ ಮಾಹಿತಿ ಅಪಲೋಡ್ ಮಾಡಬೇಕು ಎಂದು ತಿಳಿಸಿದರು.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಅರ್ಹರನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಫಲಾನುಭವಿಗಳು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಸುಳ್ಳು ಹೇಳಿಕೆಗೆ ಮರಳಗಾಬಾರದು.
| ಸಾಗರ ಖಂಡ್ರೆ ಸಂಸದರು ಬೀದರ್
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಆವಾಸ್-೨೦೨೪ ಆ್ಯಪ್‌ನ ಮೂಲಕ ಮಾಹಿತಿ ಸಂಗ್ರಹಿಸುವ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಮಾರ್ಚ್ ಅಂತ್ಯದವರೆಗೂ ಸಮೀಕ್ಷೆ ನಡೆಯಲಿದೆ. ಮನೆ ರಹಿತ ಫಲಾನುಭವಿಗಳು ಈ ಆ್ಯಪ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಬೇಕು.
| ಡಾ.ಗಿರೀಶ್ ಬದೋಲೆ ಸಿಇಒ ಜಿಪಂ ಬೀದರ್