ಜಿಲ್ಲೆ

50 ಸಾವಿರ ನೋಂದಣಿಯಾಗಲಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನಲ್ಲಿ ಇದುವರೆಗೆ ಬಿಜೆಪಿಗೆ 15 ಸಾವಿರಕ್ಕೂ ಅಧಿಕ ಸದಸ್ಯರ ನೋಂದಣಿಯಾಗಿದ್ದು, ಅಭಿಯಾನ ಪೂರ್ಣಗೊಳ್ಳುವ ವೇಳೆಗೆ ಕನಿಷ್ಠ 50 ಸಾವಿರ ಸದಸ್ಯತ್ವ ನೋಂದಾಯಿಸಲು ಮುಖಂಡರು ಕಾರ್ಯಪ್ರವೃತ್ತರಾಗಬೇಕು ಎಂದು ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ದೇವನಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಮಾತನಾಡಿ, ಈ ಕ್ಷೇತ್ರದಲ್ಲಿ ಬಲಿಷ್ಠ ನಾಯಕತ್ವದ ಕೊರತೆ ಇದೆ. ಜತೆಗೆ ಇದುವರೆಗೆ ಬಿಜೆಪಿಯಿಂದ ಶಾಸಕರಾಗಿ ಯಾರೂ ಚುನಾಯಿತರಾಗದೇ ಇರುವುದೂ ಸದಸ್ಯತ್ವ ನೋಂದಣಿ ಸ್ವಲ್ಪಮಟ್ಟದಲ್ಲಿ ಕಡಿಮೆಯಾಗಲು ಕಾರಣ ಎಂದರು.
ಒಮ್ಮೆ ಇಲ್ಲಿಂದ ಬಿಜೆಪಿಯಿಂದ ಚುನಾಯಿತರಾದರೆ ನಾಯಕತ್ವ ಬೆಳೆಯಲಿದೆ ಮತ್ತು ಸದಸ್ಯತ್ವ ಹೆಚ್ಚಲಿದೆ ಎಂದ ಅವರು, ಕಾರ್ಯಕರ್ತರು, ಮುಖಂಡರು ಅದರಲ್ಲೂ ಮಹಿಳಾ ಕಾರ್ಯಕರ್ತರು ಉತ್ಸುಕರಾಗಿ ಕೆಲಸ ಮಾಡುತ್ತಿದ್ದು, 50 ಸಾವಿರ ಗುರಿ ಮುಟ್ಟುವ ವಿಶ್ವಾಸವಿದೆ ಎಂದರು.

ಸಿಎಂ ರಾಜೀನಾಮೆ ನೀಡಲಿ: ಜಾತಿಗಣತಿ ಈ ಹಿಂದೆಯೇ ಮಾಡಬೇಕಿತ್ತು. ರಾಜ್ಯದ ಜನರ ಹಾಗೂ ಪ್ರತಿಪಕ್ಷದವರ ಗಮನ ಬೆರೇಡೆ ಸೆಳೆಯಲು ಈಗ ಜಾತಿಗಣತಿ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಜಾತಿ ಗಣತಿ ಮಾಡಿದರೆ ಯಾವ ಜಾತಿ ಎಷ್ಟಿದೆ ಎಂದು ತಿಳಿಯಲಿದೆ. ತಪ್ಪೇನಿಲ್ಲ, ಆದರೆ ಯಾವುದೋ ಒಂದರೆಡು ಜಾತಿಯನ್ನು ಗುರಿ ಮಾಡಿ ಗಣತಿ ಮಾಡಿಸುವ ಉದ್ದೇಶ ಸರಿಯಲ್ಲ ಎಂದರು. ಮುಡಾ ಹಗರಣದ ತನಿಖೆ ನಡೆಯುತ್ತಿದೆ, ಸಿದ್ದರಾಮಯ್ಯ ಅವರಂತಹ ಮೊಂಡುತನದವರನ್ನು ಎಲ್ಲಿಯೂ ನೋಡಲಿಲ್ಲ, ಇಲ್ಲಿ ಇವರದೇ ಸರ್ಕಾರದ ತನಿಖಾಧಿಕಾರಿಗಳು ಇವರ ಸರ್ಕಾರದ ಅಧೀನಕ್ಕೆ ಒಳಪಡುವುದರಿಂದ ಸಿದ್ದಾರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೆ ತನಿಖೆಯ ಮೇಲೆ ಪ್ರಭಾವ ಬೀರಿ ತನಿಖೆ ದಿಕ್ಕು ತಪ್ಪಿಸಬಹುದು. ಹಾಗಾಗಿ ಇವರ ರಾಜೀನಾಮೆ ನೀಡಿ ಸತ್ಯಾಸತ್ಯತೆಯ ತನಿಖೆಗೆ ಸಹಕರಿಸುವುದು ಸೂಕ್ತ ಎಂದರು.