ಹುಬ್ಬಳ್ಳಿ: ಕರೊನಾ ಸೋಂಕಿತರು ಪತ್ತೆಯಾಗಿರುವ ಇಲ್ಲಿಯ ಮುಲ್ಲಾ ಓಣಿ ಹಾಗೂ ಕರಾಡಿ ಓಣಿ ಸೇರಿ ಕಂಟೈನ್ವೆುಂಟ್ ಪ್ರದೇಶದ ಮುಖ್ಯಭಾಗದಲ್ಲಿ ಸೀಲ್ಡೌನ್ ಆದೇಶ ಜಾರಿಯಾಗಿರುವುದರಿಂದ ಅಂದಾಜು 50 ಸಾವಿರ ಜನರು ಪೊಲೀಸ್ ಸರ್ಪಗಾವಲಿನಲ್ಲಿ ದಿನ ಕಳೆಯುತ್ತಿದ್ದಾರೆ.
ದಿಲ್ಲಿ, ಮುಂಬೈಗೆ ಹೋಗಿಬಂದ 27 ವರ್ಷದ ಯುವಕ, 37 ವರ್ಷದ ಆತನ ಸಹೋದರ ಸೇರಿದಂತೆ ಒಂದು ಕುಟುಂಬದ 5 ಜನರಿಗೆ ಕರೊನಾ ಬಂದಿದೆ. ಎಲ್ಲಿಗೂ ಹೋಗಿರದ ಖಬರಸ್ತಾನ ಕಾಯುವ (ಕರಾಡಿ ಓಣಿ ನಿವಾಸಿ) ವೃದ್ಧನಿಗೂ ಕರೊನಾ ಬಂದಿರುವುದರಿಂದ ಆ ಪ್ರದೇಶದ 100 ಮೀ. ಸುತ್ತಳತೆಯ ಬಡಾವಣೆಗಳನ್ನು ಸೀಲ್ಡೌನ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮುಲ್ಲಾ ಒಣಿಯ 350, ಕರಾಡಿ ಓಣಿಯ ಸಾವಿರದಷ್ಟು ಮನೆಗಳು ಸೇರಿ ಅಂದಾಜು 50 ಸಾವಿರ ಜನರು ಈ ಆದೇಶದ ವ್ಯಾಪ್ತಿಗೆ ಬರುತ್ತಾರೆ. ಅವರು ಅನುಮತಿ ಇಲ್ಲದೇ ಹೊರಗೆ ಬಂದು 10 ಹೆಜ್ಜೆ ನಡೆಯಲೂ ಅವಕಾಶ ಇಲ್ಲ. ಅವರೆಲ್ಲರಿಗೆ ಅಗತ್ಯ ಸಾಮಗ್ರಿ ವಿತರಿಸಲು ಕೆಲವರಿಗೆ ಪಾಸ್ ನೀಡಿ ಮಾರಾಟಕ್ಕೆ ಸೂಚಿಸಲಾಗಿದೆ. ಸೀಲ್ಡೌನ್ ಪ್ರದೇಶದ ಜನ ಇದ್ದಲ್ಲಿಗೇ ಅಗತ್ಯ ವಸ್ತುಗಳ ರವಾನೆ ಏ. 22ರಿಂದ ಕಾರ್ಯಾರಂಭಗೊಳ್ಳಲಿದೆ.
ಔಷಧ ಸೇರಿ ಇತರೆ ವಸ್ತುಗಳು ಬೇಕೆಂದರೆ ಅಲ್ಲಿಯ ನಿವಾಸಿಗಳು ಮಹಾನಗರ ಪಾಲಿಕೆ ನೀಡಿರುವ ನಿಯಂತ್ರಣ ಕೊಠಡಿ ಸಂಖ್ಯೆಗೆ ಕರೆ ಮಾಡಿ ಹೇಳಬೇಕು. ಸುರಕ್ಷಿತ ರೀತಿಯಲ್ಲಿ ಆ ವಸ್ತುಗಳನ್ನು ಅವರ ಮನೆಗೇ ತಲುಪಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.
ಆಹಾರದ ಕಿಟ್ಗಳ ವಿತರಣೆ: ತಾಲೂಕು ಆಡಳಿತ ಇಲ್ಲಿರುವ ಜನರಿಗೆ ಅಂದರೆ ಬಿಪಿಎಲ್ ಸೇರಿದಂತೆ ಯಾವುದೇ ಕಾರ್ಡ್ ಇಲ್ಲದಿದ್ದರೂ ಆಹಾರದ ಕಿಟ್ಗಳನ್ನು ವಿತರಿಸುತ್ತಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದ್ದು, ಸದ್ಯ 40 ಕುಟುಂಬಗಳಷ್ಟೇ ಬೇಡಿಕೆ ಸಲ್ಲಿಸಿದ್ದು, ಆಹಾರವನ್ನು ತಲುಪಿಸಲಾಗುತ್ತಿದೆ ಎಂದು ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.
ಉಲ್ಲಂಘನೆ ಸಲೀಸು: ನಗರದ ಇತರ ಭಾಗಗಳಲ್ಲಿ ಇಷ್ಟು ದಿನ ಲಾಕ್ಡೌನ್ ಉಲ್ಲಂಘಿಸಿ ವಾಹನಗಳು ಮಾತ್ರ ಸಂಚರಿಸುತ್ತಿರುವುದು ಕಾಣಿಸುತ್ತಿತ್ತು. ಮಂಗಳವಾರ ಪಾದಚಾರಿ ಸಾರ್ವಜನಿಕರು ಸಹ ಮನಬಂದಂತೆ ನಗರದ ಪ್ರಮುಖ ಹಾಗೂ ಒಳ ರಸ್ತೆಗಳಲ್ಲಿ ತಿರುಗುವ ಮೂಲಕ ಆದೇಶಕ್ಕೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸಿದರು. ಚನ್ನಮ್ಮ ವೃತ್ತ, ಸವೋದಯ ವೃತ್ತಗಳಲ್ಲಿ ಬೆರಳೆಣಿಕೆಯ ವಾಹನಗಳನ್ನು ತಡೆದು, ಪೊಲೀಸರು ವಿಚಾರಿಸುತ್ತಿದ್ದ ದೃಶ್ಯ ಕಂಡುಬಂದಿತು. ಬಹುತೇಕ ಆಟೊ, ಕಾರು, ಬೈಕ್ಗಳನ್ನು ತಡೆದು ವಿಚಾರಿಸುವ ಗೊಡವೆಗೆ ಹೋಗಲಿಲ್ಲ.
ಯಾರನ್ನೇ ವಿಚಾರಿಸಿದರೂ ತರಕಾರಿ, ಔಷಧಿ ತರುವ ನೆಪ ಹೇಳುತ್ತಿದ್ದರು. ಅನಗತ್ಯವಾಗಿ ತಿರುಗದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಪೊಲೀಸರು ಹೇಳುವಷ್ಟರಲ್ಲಿ ಔಷಧ ಚೀಟಿ ತೆಗೆದು ತೋರಿಸುವಷ್ಟರ ಮಟ್ಟಿಗೆ ಜನರು ಸಲೀಸಾಗಿ ಓಡಾಡಲು ದಾರಿ ಕಂಡುಕೊಂಡಿದ್ದಾರೆ! ಅಗತ್ಯ ಸಾಮಗ್ರಿಗಳನ್ನು ಖರೀದಿಸುವುದಕ್ಕಾಗಿ ಸಾರ್ವಜನಿಕರು ಮೋರ್, ರಿಲಾಯನ್ಸ್ ಸೇರಿದಂತೆ ಇತರ ಮಳಿಗೆಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಲಾಕ್ಡೌನ್ ಮಧ್ಯೆಯೂ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಹೊರ ರೋಗಿಗಳು ಚಿಕಿತ್ಸೆಗಾಗಿ ಸರದಿ ಸಾಲಿನಲ್ಲಿ ನಿಂತಿದ್ದರು.