ಹಾಸನ: ಸಕಲೇಶಪುರದ ಯಸಳೂರು ವಲಯದಲ್ಲಿ ಡಿ.4ರಂದು ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಅಂಬಾರಿ ಆನೆ ಅರ್ಜುನನಿಗೂ ಹಾಗೂ ಕಾಡಾನೆಗೂ ನಡೆದ ಕಾಳಗದಲ್ಲಿ ಅರ್ಜುನ ಮೃತಪಟ್ಟಿದ್ದ. ಅರ್ಜುನನ ನೆನಪಿಗಾಗಿ ತಾಲೂಕಿನ ಕೆಎಫ್‌ಡಿಸಿ ನೆಡುತೋಪು, ದಬ್ಬಲಿ ಕಟ್ಟೆಯಲ್ಲಿ 50 ಲಕ್ಷ ರೂ. ವೆಚ್ಚದ ಸ್ಮಾರಕ ನಿರ್ಮಾಣಕ್ಕೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಲಿದ್ದು, ಇದರಲ್ಲಿ ಅರ್ಜುನ ಆನೆಯ ಬಗ್ಗೆ ಮಾಹಿತಿ ಮತ್ತು ಸ್ಮಾರಕದ ಮೇಲೆ ಅರ್ಜುನನ ರೀತಿ ಕೆತ್ತನೆ ಮಾಡುವ ಸಂಬಂಧ ವಿನ್ಯಾಸವನ್ನು ತಯಾರಿಸಲಾಗಿದೆ. ಸ್ಮಾರಕಗಳಲ್ಲಿ ಅರ್ಜುನ ಪ್ರತಿಕೃತಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸುವುದರ ಜತೆಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಚಿತ್ರಗಳು, ಅರ್ಜುನ ವಿವಿಧ ಆನೆ ಸೆರೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವ ಮೂಲಕ ಜನರ ಮನದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆಯನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.
ಸ್ಮಾರಕ ನಿರ್ಮಾಣ ಕಾಮಗಾರಿಯನ್ನು 6 ತಿಂಗಳ ಒಳಗಾಗಿ ಅಂದರೆ ಡಿಸೆಂಬರ್ 4ರೊಳಗೆ ಮುಗಿಸಲು ಯೋಚಿಸಲಾಗಿದೆ. ಅಂದರೆ ಅರ್ಜುನನ ಪ್ರಥಮ ಪುಣ್ಯತಿಥಿಯ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಅರ್ಜುನ ಆನೆಗೆ ಸ್ಮಾರಕ ನಿರ್ಮಾಣ ಮಾಡಿಲ್ಲ ಎಂದು ದರ್ಶನ್ ಅಭಿಮಾನಿ ಸಂಘದಿಂದ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದರು. ಆನಂತರ, ಅರಣ್ಯ ಇಲಾಖೆ ಅದಕ್ಕೆ ಅವಕಾಶ ನೀಡದೆ, ತಾತ್ಕಾಲಿಕವಾಗಿ ಮಳೆಯಿಂದ ಸಮಾಧಿಗೆ ಯಾವುದೇ ರೀತಿ ಹಾನಿಯಾಗದಂತೆ ಕ್ರಮ ಕೈಗೊಂಡಿತ್ತು.