ಕಡೂರು: ಕರ್ನಾಟಕ ಗ್ರಾಮೀಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಡಿ (ಕೆಆರ್‌ಐಡಿಎಲ್) ಎರಡು ವರ್ಷದಲ್ಲಿ ಕ್ಷೇತ್ರಾದ್ಯಂತ 50 ಕೋಟಿ ರೂಪಾಯಿಗೂ ಹೆಚ್ಚು ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಎನ್.ಎಚ್.206 ರಸ್ತೆ ಬದಿ 1.39 ಕೋಟಿ ರೂ. ವೆಚ್ಚದಡಿ ನಿರ್ಮಾಣಗೊಂಡ ಕೆಆರ್‌ಐಡಿಎಲ್ ನೂತನ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಯಾರೂ ಮಾಡದಂತಹ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ದೊರಕಿಸಿಕೊಡಲಾಗಿದೆ. ಅನುದಾನದ ಲಭ್ಯತೆ ಬಗ್ಗೆ ಪ್ರಶ್ನಿಸಿದ್ದ ವಿರೋಧಿಗಳಿಗೆ ಕೆಆರ್‌ಐಡಿಎಲ್‌ನಿಂದ ಕಟ್ಟಡಗಳು, ರಸ್ತೆ, ಸಮುದಾಯಭವನ ಹೀಗೆ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದರು.
ಮುಜರಾಯಿ ಇಲಾಖೆಯಿಂದ 6 ಕೋಟಿ ಅನುದಾನವನ್ನು ಕ್ಷೇತ್ರದ ಸಣ್ಣ ಸಣ್ಣ ಸಮುದಾಯದ ಶೇ.50 ರಷ್ಟು ದೇವಾಲಯಗಳಿಗೆ ಒದಗಿಸಿಕೊಡಲಾಗಿದೆ. ಗ್ರಾಮೀಣ ರಸ್ತೆಗಳಿಗೆ 12 ಕೋಟಿ ರೂ. ಅನುದಾನ ನೀಡಲಾಗಿದೆ. ಜತೆಯಲ್ಲಿ ನನ್ನ ವಿಶೇಷ ಅನುದಾನದಲ್ಲಿ ಕಡೂರು-ಬೀರೂರಿನ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.
ಕೆಆರ್‌ಡಿಎಲ್ ಕಚೇರಿಯನ್ನು ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಶೀಘ್ರದಲ್ಲಿ ಭದ್ರಾ ಉಪಕಣಿವೆ ಯೋಜನೆಯ 3ನೇ ಹಂತದ ಕಾಮಗಾರಿ ಚಾಲನೆಗೊಳ್ಳಲಿದೆ. ಕೆರೆಗಳ ತುಂಬಿಸುವ ಯೋಜನೆಗೆ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರ ಬೆಂಬಲವೂ ದೊರಕಿತು ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಾರ್ವಜನಿಕರ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇದಕ್ಕೆ ಲೋಪವಾಗದಂತೆ ಶಾಸಕಾಂಗ ಜತೆ ಕಾರ್ಯಾಂಗಗಳು ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಬೇಕು. ಈಗಾಗಲೇ ನಗದಿಯಾತ್ ಕಾವಲ್‌ನಲ್ಲಿ ಕೈಗಾರಿಕಾ ವಲಯದ ಜವಳಿ ಪಾರ್ಕ್ ಸ್ಥಾಪನೆಗೆ ಶಾಸಕ ಕೆ.ಎಸ್.ಆನಂದ್ ಅವರ ಜತೆಗೂಡಿ ಶ್ರಮಿಸಲಾಗಿದೆ. ಶೀಘ್ರದಲ್ಲಿ ಈ ಭಾಗದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಲಭಿಸಲಿದೆ ಎಂದರು.
ಕೆಆರ್‌ಐಡಿಎಲ್ ಎಇ ಗೋಪಾಲಯ್ಯ, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಕಡೂರಹಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾ ಶಶಿಕುಮಾರ್, ಉಪಾಧ್ಯಕ್ಷ ರಾಕೇಶ್, ತಂಗಲಿ ಗ್ರಾಪಂ ಅಧ್ಯಕ್ಷ ಗಿರೀಶ್, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಕೆಆರ್‌ಐಡಿಎಲ್ ಎಇಇ ವಿ.ಎನ್.ಅಶ್ವಿನಿ, ಅಭಿಯಂತರರಾದ ತೇಜಸ್, ಮುರಳಿ, ಲಿಂಗರಾಜು, ಪುನೀತ್, ಗಿರೀಶ್ ಹಾಗೂ ಸಿಬ್ಬಂದಿ ಇದ್ದರು.