ಜಿಲ್ಲೆ

50 ಕೆಜಿ ಗಾಂಜಾ ಜಪ್ತಿ, ಒಬ್ಬ ಬಂಧನ

ಬೀದರ್: ನವಲಸಪುರ ಹತ್ತಿರ ಗುರುವಾರ ದಾಳಿ ನಡೆಸಿರುವ ಜನವಾಡ ಠಾಣೆ ಪೊಲೀಸರು, ಅಕ್ರಮವಾಗಿ ಸಾಗಿಸುತ್ತಿದ್ದ 50 ಕೆಜಿ ಗಾಂಜಾ ಜಪ್ತಿ ಮಾಡಿ ಒಬ್ಬನನ್ನು ಬಂಧಿಸಿದ್ದಾರೆ.

ತೆಲಂಗಾಣದ ಸಂಗಾರೆಡ್ಡಿ ಕಡೆಯಿಂದ ಬೀದರ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು, ನವಲಸಪುರ ಹತ್ತಿರ ದಾಳಿ ನಡೆಸಿ ಸಂಗಾರೆಡ್ಡಿ ತಾಲೂಕಿನ ದಬಕುಂಟಾ ಗ್ರಾಮದ ದೇವಿದಾಸ ರಾಠೋಡ್(28)ನನ್ನು ಬಂಧಿಸಿದ್ದಾರೆ. ತಲಾ 2 ಕೆಜಿ ಗಾಂಜಾ ಪುಡಿ ಹೊಂದಿದ್ದ 25 ಬಾಕ್ಸ್ (ಒಟ್ಟು 50 ಕೆಜಿ) ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಡಿ.ಎಲ್.ನಾಗೇಶ, ಹೆಚ್ಚುವರಿ ಎಸ್ಪಿ ಡಾ.ಗೋಪಾಲ ಬ್ಯಾಕೋಡ್, ಡಿವೈಎಸ್ಪಿ ಬಸವೇಶ್ವರ ಹೀರಾ, ಗ್ರಾಮಾಂತರ ವೃತ್ತದ ಸಿಪಿಐ ವಿಜಯಕುಮಾರ ಬಿರಾದಾರ ಮಾರ್ಗದರ್ಶನದಲ್ಲಿ ಜನವಾಡ ಠಾಣೆ ಪಿಎಸ್ಐ ಶಿವರಾಜ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿದೆ. ತಂಡದಲ್ಲಿ ಸಿಬ್ಬಂದಿ ರವೀಂದ್ರ ಸಪಾಟೆ, ರಾಜು, ಪ್ರಭಾಕರ, ಬಾಬುಶೆಟ್ಟಿ, ಇಸ್ಮಾಯಿಲ್, ಪ್ರಭಾಕರ ಇದ್ದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.