ಜಿಲ್ಲೆ

50 ಸಾವಿರ ಮೆಣಸಿನಕಾಯಿ ಚೀಲ ಆವಕ

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆವಕ ಅರ್ಧ ಶತಕ ತಲುಪಿದ್ದು, ಪ್ರಸಕ್ತ ಸಾಲಿನ ಅತಿ ಹೆಚ್ಚು ಮೆಣಸಿನಕಾಯಿ ಆವಕವಾಗುವ ಮೂಲಕ ವರ್ತಕರಲ್ಲಿ ಸಂತಸ ಇಮ್ಮಡಿಗೊಂಡಿದೆ. ವಹಿವಾಟು ದಿನದಿಂದ ದಿನಕ್ಕೆ ಏರಿಕೆಯಾಗುವ ಲಕ್ಷಣ ಕಾಣುತ್ತಿದೆ.

ಜುಲೈ (2024)ನಿಂದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವಹಿವಾಟು ಇಳಿಮುಖವಾಗಿತ್ತು. ಆದಾಗ್ಯೂ ಪ್ರತಿ ಗುರುವಾರ ಹಾಗೂ ಸೋಮವಾರಗಳಲ್ಲಿ 5ರಿಂದ 10 ಸಾವಿರ ಚೀಲ ಆವಕದಿಂದ ನಿಧಾನಗತಿಯಲ್ಲಿ ವರ್ಷವಿಡಿ ನಡೆದಿತ್ತು. ಆದರೆ, ಡಿಸೆಂಬರ್ ಆಗಮಿಸುತ್ತಿದ್ದಂತೆ ಮಾರುಕಟ್ಟೆ ಪ್ರತಿಬಾರಿಯೂ ಆವಕದಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳಲಿದ್ದು, ಸಂಕ್ರಮಣದ ವೇಳೆ ಒಂದೂವರೆ ಲಕ್ಷ ಚೀಲ ದಾಟುವ ನಿರೀಕ್ಷೆಯಿದೆ.

ಸ್ಥಿರತೆ ಕಾಯ್ದುಕೊಂಡ ಬೆಲೆ:

ಹಿಂದಿನ ವರ್ಷ ಗುಣಮಟ್ಟದ ಮೆಣಸಿನಕಾಯಿ ಕ್ವಿಂಟಾಲ್​ಗೆ 75 ಸಾವಿರ ತಲುಪಿ ಐತಿಹಾಸಿಕ ದಾಖಲೆ ಸೃಷ್ಟಿಸಿತ್ತು. ಬಳಿಕ ಸಿಕ್ಕಾಪಟ್ಟೆ ಆವಕದಿಂದ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸ ಕಂಡುಬಂದಿತ್ತು. ಈ ಬಾರಿ ಆರಂಭದಿಂದ ಬೆಲೆ ಏರಿಕೆ ಲಕ್ಷಣ ಕಂಡುಬಂದಿಲ್ಲ, ಕಡ್ಡಿಕಾಯಿಗೆ 25,609 ರೂ. ಹಾಗೂ ಡಬ್ಬಿ ತಳಿಗೆ 26,209 ರೂ. ಬೆಲೆ ಲಭಿಸಿದೆ. ಸದ್ಯ ಮೆಣಸಿನಕಾಯಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಜನವರಿಯಿಂದ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿ ವಲಯದಿಂದ ಕೇಳಿಬಂದಿದೆ.

ಹಿಂದಿನ ವರ್ಷದಲ್ಲಿ ಕ್ವಿಂಟಾಲ್​ಗೆ 35ರಿಂದ 40 ಸಾವಿರ ರೂ. ಬೆಲೆಯಿದ್ದರೂ ಕೆಲ ರೈತರು ಇನ್ನೂ ಬೆಲೆ ಏರುವ ವಿಶ್ವಾಸದಿಂದ ಮತ್ತೆ ಕೋಲ್ಡ್ ಸ್ಟೋರೇಜ್​ನಲ್ಲಿ ಸಂಗ್ರಹಿಸಿಟ್ಟಿದ್ದರು. ಪ್ರಸಕ್ತ ಬೆಲೆ ಇಳಿಕೆ ಕಂಡು ರೈತರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನವಾಗಿದ್ದರೂ ಬೆಲೆ ಏರಿಕೆ ಕಾಣಬಹುದು ಎನ್ನಲಾಗುತ್ತಿದೆ.

ಇಂದಿನ ಮೆಣಸಿನಕಾಯಿ ಬೆಲೆ:

ಕಳೆದ ವಾರ 24 ಸಾವಿರ ಚೀಲ ಆವಕವಾಗಿದ್ದು, ಗುರುವಾರ ದಿಢೀರನೆ 48,274 ಚೀಲ ಏರಿಕೆಯಾಗಿದೆ. ಈ ಪೈಕಿ 513 ಚೀಲ ನೋಬಿಡ್ ಲಾಟ್ ಎನ್ನಲಾಗಿದೆ.

ಗುರುವಾರ ಕಡ್ಡಿ ಕ್ವಿಂಟಾಲ್​ಗೆ 2809ರಿಂದ 32309ರೂ. , ಮಾದರಿ ಬೆಲೆ 25609, ಡಬ್ಬಿ 3009 ರಿಂದ 33199 ರೂ., ಮಾದರಿ ಬೆಲೆ 26209 ಹಾಗೂ ಗುಂಟೂರು 1029ರಿಂದ 16709,ರೂ. ಮಾದರಿ ಬೆಲೆ 13569 ರೂ. ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.