ನೆಲಮಂಗಲ: ವರ್ಷದೊಳಗಾಗಿ 50 ಸಾವಿರ ಮನೆ, ಮುಂದಿನ 3 ವರ್ಷಗಳಲ್ಲಿ 3 ಲಕ್ಷಕ್ಕೂ ಅಧಿಕ ಮನೆ ನಿರ್ಮಿಸುವ ಗುರಿ ಇದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕು ಅಗ್ರಹಾರ ಪಾಳ್ಯದಲ್ಲಿ ಸೋಮವಾರ ರಾಜೀವ್ ಗಾಂಧಿ ವಸತಿ ನಿಗಮದಿಂದ ಬೆಂಗಳೂರು ವಸತಿ ಯೋಜನೆಯಡಿ ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
4 ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 1 ಲಕ್ಷ ಮನೆ ನಿರ್ಮಿಸುವುದಾಗಿ ಹೇಳಿದ್ದು ಅವಶ್ಯವಿರುವ ಜಾಗವನ್ನು ಗುರುತಿಸಿದಲ್ಲದೆ ಕೇಂದ್ರ ಸರ್ಕಾರದ ಅನುದಾನ ಪಡೆದು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಯೋಜನೆ ಮರು ಪರಿಶೀಲಿಸಿ ಲಕ್ಷ ಮನೆಗಳ ಪೈಕಿ 836 ಮನೆಗಳ ನಿರ್ಮಾಣಕ್ಕೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಅಡಿಗಲ್ಲು ಹಾಕಲಾಗಿದೆ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕ ಬೆಲೆಬಾಳುವ ಸರ್ಕಾರಿ ಜಾಗ ಹೆಚ್ಚಿದ್ದು ಒತ್ತುವರಿ ಮಾಡಿಕೊಳ್ಳುವುದನ್ನು ತಪ್ಪಿಸಿ ಬಡವರಿಗಾಗಿ ಮನೆ ನಿರ್ಮಿಸಲಾಗುತ್ತಿದೆ. ವಸತಿ ಸಚಿವರ ಬಳಿ ಕ್ಷೇತ್ರಕ್ಕೆ 5 ಸಾವಿರ ಮನೆಗಳ ಬೇಡಿಕೆ ಇಟ್ಟಿದ್ದು ಒಪ್ಪಿಗೆ ನೀಡಿದ್ದಾರೆ ಎಂದರು.
ಕ್ಷೇತ್ರ ವ್ಯಾಪ್ತಿಯ ಅರ್ಹ ಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ ಎಂಬ ವಿಶ್ವಾಸವಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನನ್ನನ್ನು ಬೆಂಗಳೂರು ನಗರ ಜಿಪಂ ಅಧ್ಯಕ್ಷನಾಗಿ ಮಾಡಿದ ಕೀರ್ತಿ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ಸಲ್ಲಲಿದೆ ಎಂದು ಜಿ.ಮರೀಸ್ವಾಮಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ಪಾರ್ವತಿಚಂದ್ರಪ್ಪ, ತಾಪಂ ಅಧ್ಯಕ್ಷೆ ಜ್ಯೋತಿಕಲ್ಲೇಶ್, ಉಪಾಧ್ಯಕ್ಷೆ ಜಯಶ್ರೀ ಅಶೋಕ್, ಸದಸ್ಯ ರವಿಕುಮಾರ್, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್‌ಕುಮಾರ್‌ಮೀನಾ, ಜಿಲ್ಲಾಧಿಕಾರಿ ಶಿವಮೂರ್ತಿ, ಜಿಪಂ ಸದಸ್ಯ ರವಿಕುಮಾರ್, ಗೋಪಾಲಪುರ ಗ್ರಾಪಂ ಅಧ್ಯಕ್ಷ ಟಿ.ಎಂ.ಬಸವೇಗೌಡ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮಪ್ರಸಾದ್‌ಮನೋಹರ ವಿ. ಇತರರಿದ್ದರು.
ಮನೆ ನಿರ್ಮಾಣಕ್ಕೆ 6.5 ಲಕ್ಷ ರೂ.ವೆಚ್ಚ: ನೆಲಮಹಡಿ ಜತೆಗೆ 3 ಮಹಡಿಗಳ ಕಟ್ಟಡ ಕಟ್ಟಲು ತಿರ್ಮಾನಿಸಿದ್ದು,1 ಮನೆ ನಿರ್ಮಾಣಕ್ಕೆ 6.5 ಲಕ್ಷ ರೂ. ವೆಚ್ಚ ತಗಲಲಿದ್ದು, 3 ರಿಂದ 4 ಲಕ್ಷವರೆಗಿನ ಹಣವನ್ನು ಸರ್ಕಾರದಿಂದಲೇ ಭರಿಸುವ ಯೋಜನೆಯಿದೆ. ಉಳಿದ ಹಣ ತೀರಿಸಲು ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲಾಗುವುದು. ತಿಂಗಳೊಳಗಾಗಿ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಹುಮಹಡಿ ಮನೆಗಳ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದು ಸೋಮಣ್ಣ ತಿಳಿಸಿದರು.