ಜಿಲ್ಲೆ

ಕರೊನಾಕ್ಕೆ ಮತ್ತೆ ಐವರು ಬಲಿ ; 50 ಮಂದಿಗೆ ಸೋಂಕು

Tumakuru

ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಸ್ವಲ್ಪಮಟ್ಟಿಗೆ ತಗ್ಗಿದೆ. ಆದರೆ, ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿರುವ ಸಂಖ್ಯೆ ಏರುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರವು ಕರೊನಾ ಐವರನ್ನು ಬಲಿ ಪಡೆದಿದೆ. ಮೃತರ ಸಂಖ್ಯೆ 108ಕ್ಕೇರಿಕೆಯಾಗಿದೆ.

ಸೋಮವಾರ ಒಂದೇ ದಿನ 50 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ 103 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರ ಸಂಖ್ಯೆ 3470ಕ್ಕೆ ಮುಟ್ಟಿದೆ. ಈವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವರ ಸಂಖ್ಯೆ 2462 ತಲುಪಿದೆ.

ತುಮಕೂರು ತಾಲೂಕಿನಲ್ಲಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪಾವಗಡ 11, ಗುಬ್ಬಿ 11, ಚಿಕ್ಕನಾಯಕನಹಳ್ಳಿ 9, ಗುಬ್ಬಿ 5 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನೂ ತಿಪಟೂರು, ಮಧುಗಿರಿಯಲ್ಲಿ ತಲಾ ಮೂವರಲ್ಲಿ, ತುರುವೇಕೆರೆಯಲ್ಲಿ ಇಬ್ಬರಲ್ಲಿ ಹಾಗೂ ಶಿರಾ , ಕುಣಿಗಲ್ ಹಾಗೂ ಕೊರಟಗೆರೆಯಲ್ಲಿ ತಲಾ ಓರ್ವರಲ್ಲಿ ಸೋಂಕು ದೃಢಪಟ್ಟಿದೆ.

ಐವರು ಬಲಿ !: ಪತ್ರಕರ್ತ ಸೇರಿ ಐವರು ಕರೊನಾಕ್ಕೆ ಬಲಿಯಾಗಿದ್ದಾರೆ. ತುಮಕೂರಿನ ಇಬ್ಬರು, ಗುಬ್ಬಿ, ಪಾವಗಡ ಹಾಗೂ ತಿಪಟೂರಿನಲ್ಲಿ ಓರ್ವರು ಓರ್ವರು ಮೃತಪಟ್ಟಿದ್ದಾರೆ. ಗುಬ್ಬಿ ಪಟ್ಟಣದ 37 ವರ್ಷದ ಪತ್ರಕರ್ತ ತೀವ್ರ ಉಸಿರಾಟ ತೊಂದರೆಯಿಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದಾಗ ಆ.6 ರಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಹೆಚ್ಚಿನ ಚಿಕಿತ್ಸೆಗೆ ಅಶ್ವಿನಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಆ.15 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತುಮಕೂರು ಹೊರವಲಯದ ಅಂತರಸನಹಳ್ಳಿಯ 75 ವರ್ಷದ ವೃದ್ಧೆ ಜ್ವರ, ಉಸಿರಾಟ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ.13 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಹೆಗಡೆ ಕಾಲನಿಯ 44ವರ್ಷದ ಮಹಿಳೆ, ತಿಪಟೂರಿನ ಶಾರದಾನಗರದ 68 ವರ್ಷದ ವೃದ್ಧೆ,

ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ 40 ವರ್ಷದ ವ್ಯಕ್ತಿ ತೀವ್ರ ಉಸಿರಾಟ ತೊಂದರೆ, ಜ್ವರಕ್ಕೆ ತುತ್ತಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಎಲ್ಲರೂ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿ ಅನ್ವಯ ನೆರವೇರಿಸಲಾಗಿದೆ.

900 ಸಕ್ರಿಯ ಪ್ರಕರಣ : ಸೋಮವಾರ ಒಂದೇ ದಿನ 103 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿರುವುದು ಅಮಾಧಾನ ಕರವೆನಿಸಿದೆ. ಸೋಂಕಿತರಿಗಿಂತ ಗುಣಮುಖರಾದವರ ಪ್ರಮಾಣ ಹೆಚ್ಚಳವಾಗಿದೆ. ಈವರೆಗೆ 2462 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 900 ಸಕ್ರಿಯ ಪ್ರಕರಣಗಳಿವೆ. ಇನ್ನೂ 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಆತಂಕವೆನಿಸಿದೆ.