ಮಂಜುನಾಥ ತಿಮ್ಮಯ್ಯ ಮೈಸೂರು
ನಗರದ ರಸ್ತೆಗೆ ಹೊಸದಾಗಿ 50 ಬಸ್‌ಗಳು ಇಳಿದಿದ್ದು, ಬೇಡಿಕೆ ಇರುವ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ. ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಶಕ್ತಿ ಯೋಜನೆಯಿಂದ ಉಂಟಾಗಿರುವ ಪ್ರಯಾಣಿಕರ ದಟ್ಟಣೆ ತಗ್ಗುವ ನಿರೀಕ್ಷೆಯೂ ಇದೆ.
ನಗರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಇವರೆಲ್ಲ ಶಾಲಾ-ಕಾಲೇಜು ಮತ್ತು ಮನೆ-ಹಾಸ್ಟೆಲ್‌ಗಳಿಗೆ ಹೋಗಿ ಬರಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಇದರಿಂದ ಬೆಳಗ್ಗೆ-ಮಧ್ಯಾಹ್ನ-ಸಂಜೆ ಸಮಯದಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತದೆ. ಸೀಟು ಸಿಗುವುದಿರಲಿ, ನಿಂತುಕೊಳ್ಳಲು ಸಹ ಜಾಗ ಇರಲ್ಲ. ಅಷ್ಟರ ಮಟ್ಟಿಗೆ ಬಸ್‌ಗಳು ರಶ್ ಆಗಿರುತ್ತವೆ.
ಇದರೊಂದಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಸಹ ದ್ವಿಗುಣಗೊಂಡಿದೆ. ಬಸ್‌ನಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದೆ. ಇದರಿಂದ ಬಸ್‌ಗಳ ಮೇಲೆ ಒತ್ತಡ ಉಂಟಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಕೆಎಸ್‌ಆರ್‌ಟಿಸಿ ನಗರ ವಿಭಾಗದ ವತಿಯಿಂದ ಹೊಸ ಬಸ್‌ಗಳಿಗೆ ಬೇಡಿಕೆ ಸಲ್ಲಿಸಿತ್ತು. ಅದಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.
6 ತಿಂಗಳ ಹಿಂದೆ ಟಾಟಾ ಕಂಪನಿಗೆ ಸೇರಿದ 5 ಬಸ್‌ಗಳು ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ಸಂಚಾರ ನಡೆಸಿದ್ದವು. ಪ್ರಯಾಣಿಕರ ಸಂಖ್ಯೆ, ಚಲಿಸುವ ಮಾರ್ಗ, ಇಂಧನ ಬಳಕೆ ಸೇರಿದಂತೆ ಎಲ್ಲ ಆಯಾಮಗಳಲ್ಲೂ ಪರಿಶೀಲನೆ ಮಾಡಿ ಬಳಿಕ ಇದಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ, ಹೊಸದಾಗಿ 50 ಬಸ್‌ಗಳು ರಸ್ತೆಗಿಳಿದು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ.
ಗ್ರಾಮಾಂತರ ವಿಭಾಗದಲ್ಲಿ ಈಗಾಗಲೇ ಅಶ್ವಮೇಧ ಬಸ್‌ಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಇದೀಗ ನಗರ ವಿಭಾಗದಲ್ಲಿ ಬಿಳಿ-ಆಕಾಶ ನೀಲಿ ಬಣ್ಣದ ಬಸ್‌ಗಳು ಗಮನ ಸೆಳೆಯುತ್ತಿವೆ. ನಗರದ ಪ್ರದೇಶದಲ್ಲಿ ಸಂಚರಿಸುವ ಬಸ್‌ಗಳಲ್ಲಿ 22 ಆಸನದ ಅವಶ್ಯಕತೆ ಇದೆ. ಆ ಪ್ರಕಾರ ಹೊಸ ಬಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗಾಗಿ, 22 ಆಸನವಿರುವಂತೆ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ನಿಂತುಕೊಳ್ಳಲು ಬಸ್‌ನಲ್ಲಿ ಜಾಗ ದೊರೆತಿದೆ.
ಹೊಸದಾಗಿ ಬಂದಿರುವ ಟಾಟಾ ಬಸ್‌ಗಳ ಒಳವಿನ್ಯಾಸ ಪ್ರಯಾಣಿಕರ ಸ್ನೇಹಿಯಾಗಿರುವಂತೆ ಬದಲಾವಣೆ ಮಾಡಲಾಗಿದೆ. ಬಸ್‌ನ ಛಾವಣಿ ಮೇಲೆ ಗಾಳಿ ಬರಲು ಎರಡು ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಬ್ಯಾಗ್ ಇಡಲು ಕಂಪಾರ್ಟ್‌ಮೆಂಟ್ ಇದೆ. ಬೆಳಕು-ಗಾಳಿ ಬರಲು ಉತ್ತಮ ವ್ಯವಸ್ಥೆ ಇದೆ. ಆರಾಮದಾಯಕ ಆಸನದ ವ್ಯವಸ್ಥೆ ಇರುವುದರಿಂದ ಹೊಸ ಬಸ್‌ಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.
ನರ್ಮ್ ಯೋಜನೆಯಲ್ಲಿ ಖರೀದಿಸಿದ 100ಕ್ಕೂ ಹೆಚ್ಚು ಬಸ್‌ಗಳಿಗೆ 15 ವರ್ಷ ಪೂರ್ಣಗೊಂಡಿವೆ. ಆದ್ದರಿಂದ ಸಾರಿಗೆ ಇಲಾಖೆಯ ನಿಯಮಾನುಸಾರ ಅವಧಿ ಮುಗಿದ ಕೆಲ ಬಸ್‌ಗಳನ್ನು ಗುಜರಿಗೆ ಹಾಕಬೇಕು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮೈಸೂರಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳು ಇರಲಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡು ಹೊಸ ಬಸ್‌ಗಳನ್ನು ತರಿಸಲಾಗಿದೆ.
ಮೈಸೂರಲ್ಲಿ ಸಂಚರಿಸುವ ಬಹುತೇಕ ನಗರ ಸಾರಿಗೆ ಬಸ್‌ಗಳಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಬೋರ್ಡ್‌ಗಳು ಕೈ ಕೊಡುತ್ತಿವೆ. ಇದರಿಂದ ಈ ಹಿಂದೆ ಅನುಸರಿಸುತ್ತಿದ್ದಂತೆ ಕೈ ಬರಹವುಳ್ಳ ಬೋರ್ಡ್‌ಗಳನ್ನೇ ನಗರ ಸಾರಿಗೆ ಬಸ್‌ಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಎಲೆಕ್ಟ್ರಿಕ್ ಬೋರ್ಡ್‌ಗಳ ಅಳವಡಿಕೆ ಹೊರೆಯಾಗುವುದರಿಂದ ಹಾಗೂ ಪದೇ ಪದೆ ಕೆಡುತ್ತಿರುವುದರಿಂದ ಕೈ ಬರಹದ ಬೋರ್ಡ್‌ಗಳೇ ಸೂಕ್ತ ಎನಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ಬಸ್‌ಗಳಿಗೂ ಬರಹದ ಬೋರ್ಡ್‌ಗೆ ಸ್ಥಳ ಮೀಸಲಿಡಲಾಗಿದೆ.
ಪ್ರಯಾಣಿಕರ ದಟ್ಟಣೆಯಿಂದ ಆರಾಮದಾಯಕ, ಸುಲಲಿತ ಪ್ರಯಾಣಕ್ಕೆ ಅಡ್ಡಿ ಉಂಟಾಗುತ್ತಿದೆ. 52 ಆಸನಗಳ ಬಸ್‌ನಲ್ಲಿ 80ರಿಂದ 90 ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಕುಳಿತು ಕೊಳ್ಳಲು ಆಸನಗಳು ಸಿಗುತ್ತಿಲ್ಲ. ಹೀಗಾಗಿ, ನಿಂತುಕೊಂಡೇ ಪ್ರಯಾಣ ಮಾಡಬೇಕಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಪ್ರಯಾಣ ಇನ್ನಷ್ಟು ದುರಸ್ತವಾಗಿದೆ. ಕೆಲ ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲಿಸದೆ ಹಾಗೆ ಸಾಗುತ್ತವೆ.
ಕೆಲ ಸಂದರ್ಭದಲ್ಲಿ ಬಸ್‌ನಲ್ಲಿ ಕಾಲಿಡಲು ಸಹ ಜಾಗ ಇರಲ್ಲ. ನಿಂತುಕೊಂಡು ಹೋಗಲು ಆಗದಂತಹ ಸ್ಥಿತಿ ಇರುತ್ತದೆ. ಕಚೇರಿ, ಶಾಲಾ-ಕಾಲೇಜಿಗೆ ನಿತ್ಯ ಸಂಚಾರ ಮಾಡುವವರು ಇದರಿಂದಾಗಿ ಹೈರಾಣಾಗಿ ಹೋಗಿದ್ದಾರೆ. ಈ ನಡುವೆ, ಸೀಟ್ ಹಿಡಿಯಲು ಹರಸಾಹಸ ಪಡುವಂತಾಗಿದೆ. ನಿತ್ಯ ಗಲಾಟೆಗಳು ಸಾಮಾನ್ಯ ಎನಿಸಿವೆ. ಆದ್ದರಿಂದ ಅಗತ್ಯ ಇರುವ ಕಡೆ ಹೊಸದಾಗಿ ಬಸ್‌ಗಳು ಬಿಡಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ವಿದ್ಯಾರ್ಥಿನಿ ದೀಪಿಕಾ ಒತ್ತಾಯಿಸಿದರು.
ಶಕ್ತಿಯೋಜನೆ ಬಳಿಕ ಪ್ರಯಾಣಿಕರ ಏರಿಕೆಗೆ ತಕ್ಕಂತೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಿಲ್ಲ. ಕೆಲ ಮಾರ್ಗಗಳಲ್ಲಿ ಬಸ್ ಸಂಚಾರ ರದ್ದುಪಡಿಸಲಾಗಿದೆ. ಸಂಚಾರ ಮಾರ್ಗವನ್ನೇ ಬದಲಿಸಲಾಗಿದೆ. ಟ್ರಿಪ್‌ಗಳ ಸಂಖ್ಯೆ ಇಳಿಕೆ ಮಾಡಲಾಗಿದೆ.
ನಿಗದಿತ ಸಮಯಕ್ಕೆ ಬಸ್‌ಗಳೂ ಬರುತ್ತಿಲ್ಲ. 30 ನಿಮಿಷ, 1 ಗಂಟೆ ತಡವಾಗಿ ಬಸ್‌ಗಳು ಬರುತ್ತಿವೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಿದೆ. ಹೊಸ ಬಸ್‌ಗಳು ಸಾಲದು. ಹೀಗಾಗಿ, ಈ ಸಮಸ್ಯೆಯೂ ಬಗೆಹರಿಯುವುದಿಲ್ಲ ಎಂದು ವಿದ್ಯಾರ್ಥಿ ಆರ್. ಕಿರಣ್‌ಕುಮಾರ್ ಹೇಳಿದರು.
ಶಕ್ತಿ ಯೋಜನೆ ಬಳಿಕ ಬಸ್‌ನ ಆಸನ ಸಾಮರ್ಥ್ಯಕ್ಕೆ ಮೀರಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ಬಸ್‌ಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ನಿಧಾನಗತಿಯಲ್ಲಿ ದುಸ್ಥಿತಿಯತ್ತ ಮುಖ ಮಾಡುತ್ತಿವೆ. ಬಹಳಷ್ಟು ಹಳೇ ಬಸ್‌ಗಳಿವೆ. ಅವುಗಳು ಪ್ರಯಾಣಿಕರನ್ನು ಹೊತ್ತು ಸಾಗಿಸಲು ಏದುಸಿರು ಬಿಡುತ್ತಿವೆ.