ಶಿವಮೊಗ್ಗ: ತಾಲೂಕಿನ ಹಾಡೋನಹಳ್ಳಿ ಸಮೀಪದ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ 50 ಲಾರಿ ಲೋಡ್ ಮರಳು ದಾಸ್ತಾನು ವಶಕ್ಕೆ ಪಡೆದಿದೆ.
ತಹಸೀಲ್ದಾರ್ ವಿ.ಎಸ್.ರಾಜೀವ್ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಾಂತರ ಠಾಣೆ ಪೊಲೀಸರ ತಂಡ ದಾಳಿ ನಡೆಸಿದೆ. ಅಧಿಕಾರಿಗಳ ದಾಳಿ ಸುಳಿವು ಅರಿತ ಮರಳು ದಂಧೆಕೋರರು ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದಾರೆ. ನದಿಯಂಚಿನಲ್ಲಿ ದಾಸ್ತಾನು ಮಾಡಿದ್ದ ಭಾರಿ ಪ್ರಮಾಣದ ಮರಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.
ಮರಳು ದಾಸ್ತಾನನ್ನು ತಾಲೂಕು ಆಡಳಿತವು ಪಿಡಬ್ಲುೃಡಿ ಇಲಾಖೆ ವಶಕ್ಕೆ ಒಪ್ಪಿಸಿದೆ. ಇತ್ತೀಚೆಗೆ ಹಾಡೋನಹಳ್ಳಿ ಸುತ್ತಮುತ್ತಲಿನ ತುಂಗಭದ್ರಾ ನದಿಯಂಚಿನಲ್ಲಿ ಭಾರಿ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ದೂರುಗಳಿದ್ದವು. ಹಾಡೋನಹಳ್ಳಿ ಸುತ್ತಮುತ್ತಲಿನ ತುಂಗಭದ್ರಾ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.