ಬೆಂಗಳೂರು: ದೇಶದ ಸಾರಿಗೆ ವ್ಯವಸ್ಥೆ ಬಲಪಡಿಸಲು 50 ಲಕ್ಷ ಕೋಟಿ ರೂ. ಮೊತ್ತದ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು. ಯಶವಂತಪುರ ನಿಲ್ದಾಣದಲ್ಲಿ ಶನಿವಾರ ಯಶವಂತಪುರ- ಕಾರವಾರ- ವಾಸ್ಕೋ ಡ ಗಾಮ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ರೈಲ್ವೆ ಸಂಪರ್ಕ ಜಾಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಉಪನಗರ ರೈಲು ಯೋಜನೆ, ಬೈಯಪ್ಪನಹಳ್ಳಿ ಹೊಸ ಟರ್ವಿುನಲ್ ನಿರ್ವಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಯಶವಂತಪುರ- ಕಾರವಾರ-ವಾಸ್ಕೋ ಡ ಗಾಮ ಎಕ್ಸ್ಪ್ರೆಸ್ ರೈಲು ಸೇವೆಗೆ ಚಾಲನೆ ದೊರೆಯಲು ಸಂಸದೆ ಶೋಭಾ ಕರಂದ್ಲಾಜೆ ಕಾರಣ. ಕಿತ್ತೂರು ರಾಣಿ ಚನ್ನಮ್ಮನಂತೆ ಹಠ ಬಿಡದೆ ರೈಲು ಸಂಚರಿಸುವಂತೆ ಮಾಡಿದ್ದಾರೆ. ಅದೇ ರೀತಿ ಚಿಕ್ಕಮಗಳೂರು, ಉಡುಪಿ ಭಾಗಗಳಿಗೆ ಇನ್ನಷ್ಟು ರೈಲು ಸಂಚಾರಕ್ಕೆ ಅವರು ಬೇಡಿಕೆಯಿಟ್ಟಿದ್ದು, ಅದನ್ನು ಕಾಲಕಾಲಕ್ಕೆ ಈಡೇರಿಸಲಾಗುವುದು ಎಂದು ತಿಳಿಸಿದರು.
ಶಿರಾಡಿ ಘಾಟಿ ಒತ್ತಡ ಇಳಿಕೆ: ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನೂತನ ರೈಲು ಸೇವೆಗೆ ಚಾಲನೆ ನೀಡಿರುವುದು ಸಂತಸ ತಂದಿದೆ. ಹೊಸ ರೈಲಿನಿಂದ ಶಿರಾಡಿ ಘಾಟಿ ಮಾರ್ಗದಲ್ಲಿನ ವಾಹನ ಸಂಚಾರದ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ಆ ಮಾರ್ಗದಲ್ಲಿ ವಾಹನ ದಟ್ಟಣೆ ಇಳಿಕೆಯಾಗುವುದರ ಜತೆಗೆ, ರಸ್ತೆ ಗುಣಮಟ್ಟ ಉಳಿಯಲಿದೆ. ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಬೇಕಾಗುವ ಭೂಮಿ ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಜತೆಗೆ ಯೋಜನೆಯ ಅರ್ಧ ವೆಚ್ಚವನ್ನೂ ಭರಿಸಲಿದೆ ಎಂದು ಭರವಸೆ ನೀಡಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನೂತನ ರೈಲು ಸಂಚಾರದಿಂದ ಬೆಂಗಳೂರಿನಿಂದ ಕಾರವಾರಕ್ಕೆ ತೆರಳಲು 2.5 ಗಂಟೆ ಸಮಯ ಉಳಿತಾಯ ವಾಗಲಿದೆ. ಇದೇ ಮಾದರಿಯಲ್ಲಿ ರಾಜ್ಯದ ಇನ್ನಷ್ಟು ಜಿಲ್ಲೆಗಳಿಗೆ ರೈಲು ಸೇವೆ ಹೆಚ್ಚಿಸುವ ಅಗತ್ಯವಿದೆ. ಪ್ರಮುಖವಾಗಿ ಚಿಕ್ಕಮಗಳೂರು, ಕರಾವಳಿ ಭಾಗ, ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಿಸಬೇಕಿದೆ.
ಹಾಸನ, ಬೇಲೂರು, ಶೃಂಗೇರಿಗೆ ವಯಾ ಚಿಕ್ಕಮಗಳೂರು ಮಾರ್ಗದಲ್ಲಿ ರೈಲು ಸೇವೆ ಅಗತ್ಯವಿದೆ. ಅದರ ಬಗ್ಗೆ ರೈಲ್ವೆ ಸಚಿವರು ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಯಶವಂತಪುರ-ವಿಜಯಪುರ-ಯಶವಂತಪುರ ರೈಲಿನ ಬೋಗಿಗಳನ್ನು ಎಲ್ಎಚ್ಬಿ ಬೋಗಿಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್ ಇನ್ನಿತರರಿದ್ದರು.
ಮಹಿಳೆಯರಿಂದಲೇ ನಿರ್ವಹಣೆ
ಭಾನುವಾರ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನೂತನ ರೈಲಿನ ಸಂಪೂರ್ಣ ನಿರ್ವಹಣೆಯನ್ನು ಮಹಿಳಾ ಸಿಬ್ಬಂದಿಗೆ ವಹಿಸಲಾಗಿದೆ. ಅದರಂತೆ ಲೋಕೋ ಪೈಲಟ್ ಬಾಲ ಶಿವಪಾರ್ವತಿ, ಸಹಾಯಕ ಲೋಕೋ ಪೈಲಟ್ ವಿ.ಎಸ್.ಅಭಿರಾಮಿ ರೈಲು ಚಾಲನೆ ಮಾಡಿದರು. ಜತೆಗೆ ರಿಚಾಮಣಿ ತ್ರಿಪಾರಿ ಗಾರ್ಡ್ ಆಗಿ ಕಾರ್ಯನಿರ್ವಹಿಸಿದರು.
ರೈಲು ಸಂಚಾರದ ವೇಳಾಪಟ್ಟಿ
ನೂತನ ರೈಲು ಪ್ರತಿದಿನ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಡಲಿದೆ. ಕುಣಿಗಲ್, ಹಾಸನ, ಪಡಿಲ್, ಕುಂದಾಪುರ ಮೂಲಕ ಸಾಗಿ ಬೆಳಗ್ಗೆ 8.30ಕ್ಕೆ ಕಾರವಾರ ಮತ್ತು 10.30ಕ್ಕೆ ವಾಸ್ಕೋಗೆ ತಲುಪಲಿದೆ. ಅದೇ ರೀತಿ ವಾಸ್ಕೋದಿಂದ ಸಂಜೆ 5.30ಕ್ಕೆ ಹೊರಡಲಿರುವ ರೈಲು ರಾತ್ರಿ 7.25ಕ್ಕೆ ಕಾರವಾರ, 9.30ಕ್ಕೆ ಕುಂದಾಪುರಕ್ಕೆ ಬರಲಿದ್ದು, ಬೆಳಗ್ಗೆ 8ಕ್ಕೆ ಯಶವಂತಪುರ ತಲುಪಲಿದೆ.