ಜಿಲ್ಲೆ

ಮೆಸ್ಕಾಂಗೆ 50 ಕೋ.ರೂ. ಅಧಿಕ ನಷ್ಟ

ಮಂಗಳೂರು: ಕರೊನಾ ವೈರಸ್ ಲಾಕ್‌ಡೌನ್ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ)ಗೂ ಭಾರಿ ಪ್ರಮಾಣದಲ್ಲಿ ನಷ್ಟದ ಬಿಸಿ ತಟ್ಟಿದೆ. ಏ.14ರವರೆಗಿನ ಲಾಕ್‌ಡೌನ್ ಅವಧಿಯಲ್ಲಿ ಅಂದಾಜು 50 ಕೋಟಿ ರೂಪಾಯಿಗಿಂತಲೂ ಹೆಚ್ಚು ಅದಾಯ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

ನಗರ ವ್ಯಾಪ್ತಿಯ ನಷ್ಟ ಒಂದು ರೀತಿಯಾದರೆ, ಗ್ರಾಮಾಂತರದ ನಷ್ಟ ಇನ್ನೊಂದು ರೀತಿ. ನಗರದ ವ್ಯಾಪ್ತಿಯಲ್ಲಿ, ಮಾಲ್, ಕಾಂಪ್ಲೆಕ್ಸ್ ಹಾಗೂ ಪ್ರಮುಖ ಕೈಗಾರಿಕೆಗಳು ಮುಚ್ಚಿರುವ ಕಾರಣ ವಿದ್ಯುತ್ ಬಳಕೆಯಲ್ಲಿ ಸರಾಸರಿಗಿಂತ ಶೇ.25ರಿಂದ 30ರಷ್ಟು ಇಳಿಕೆಯಾಗಿದೆ. ಇದೇ ವೇಳೆ ಗ್ರಾಮಾಂತರ ಪ್ರದೇಶದಲ್ಲಿ ಉಚಿತ ವಿದ್ಯುತ್ ಕೃಷಿ ಪಂಪ್‌ಸೆಟ್‌ಗಳ ನಿರಂತರ ಚಾಲನೆಯಿಂದ ವಿದ್ಯುತ್ ಬಳಕೆ ಅಧಿಕವಾಗಿ ಮೆಸ್ಕಾಂಗೆ ನಷ್ಟವಾಗುತ್ತಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಗ್ರಾಮಾಂತರದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಈ ಬಾರಿ ನಗರದಲ್ಲಿ ಬಳಕೆ ಪ್ರಮಾಣ ಕಡಿಮೆಯಾಗಿರುವುದರಿಂದ, ಗ್ರಾಮಾಂತರ ಬಳಕೆ ಮೆಸ್ಕಾಂಗೆ ದುಬಾರಿಯಾಗಿ ಪರಿಣಮಿಸಿದೆ.

ಸರ್ಕಾರ ಮುಂದಿನ ದಿನಗಳಲ್ಲಿ ಮೆಸ್ಕಾಂನ ನಷ್ಟ ಸರಿಗೂಗಿಸಲು ನೆರವಾಗದಿದ್ದರೆ , ಅದರ ನೇರ ಪರಿಣಾಮ ಗ್ರಾಹಕರ ಮೇಲಾಗಲಿದೆ.

ಜಿಲ್ಲಾವಾರು ನಷ್ಟದ ವಿವರ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಾಲ್ಕು ಜಿಲ್ಲೆಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತಿದೆ. ದ ಕ ಜಿಲ್ಲಾ ವ್ಯಾಪ್ತಿಯಲ್ಲಿ ಆಗಿರುವ ನಷ್ಟ, 20 ಕೋಟಿ ರೂ., ಶಿವಮೊಗ್ಗದಲ್ಲಿ 16 ಕೋಟಿ ರೂ., ಉಡುಪಿಯಲ್ಲಿ 5 ಕೋಟಿ ರೂ. ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 6.25 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ ತಿಂಗಳಿಗೆ ಅಂದಾಜು 122.7ಮಿಲಿಯನ್ ಯುನಿಟ್ ವಿದ್ಯುತ್ ಬಳಕೆಯಾಗುತ್ತದೆ. ಆದರೆ ಮಾರ್ಚ್ ತಿಂಗಳ ಅಂಕಿ ಅಂಶ ತೆಗೆದರೆ ಇದರಲ್ಲಿ ಸುಮಾರು 29 ಮಿಲಿಯನ್ ಯೂನಿಟ್‌ನಷ್ಟು ಬಳಕೆಯಲ್ಲಿ ಕಡಿಮೆಯಾಗಿದೆ. ಲಾಕ್‌ಡೌನ್ ಮುಂದುವರಿದರೆ ಈ ನಷ್ಟ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಎನ್ನುವುದು ಮೆಸ್ಕಾಂ ಅಧಿಕಾರಿಗಳ ಅಭಿಪ್ರಾಯ.

ಮೆಸ್ಕಾಂ ಗ್ರಾಹಕರು-ಆದಾಯ: ಮೆಸ್ಕಾಂ ಗ್ರಾಹಕರ ಸಂಖ್ಯೆ 24.29 ಲಕ್ಷ. 17.70 ಲಕ್ಷ ಗೃಹಬಳಕೆ, 3.45 ಲಕ್ಷ ಪಂಪ್‌ಸೆಟ್ ಬಳಕೆದಾರರು, 2.19 ಲಕ್ಷ ವಾಣಿಜ್ಯ ಗ್ರಾಹಕರು, 33 ಸಾವಿರ ಉದ್ಯಮ ವಲಯದವರು , 24 ಸಾವಿರ ಬೀದಿದೀಪ ಸ್ಥಾವರಗಳು, 16 ಸಾವಿರ ನೀರು ಸರಬರಾಜು ಸ್ಥಾವರಗಳು ಸೇರಿವೆ. ಮೆಸ್ಕಾಂನ ಆದಾಯದಲ್ಲಿ ಶೇ.26.07ರಷ್ಟು ಗೃಹ ಬಳಕೆಯಿಂದ, ಶೇ.16.62ರಷ್ಟು ವಾಣಿಜ್ಯ, ಶೇ.19.46ರಷ್ಟು ಕೈಗಾರಿಕೆಗಳಿಂದ, ಶೇ.5.43ರಷ್ಟು ಬೀದಿದೀಪ-ನೀರು ಸರಬರಾಜಿನಿಂದ, ಶೇ.27.15ರಷ್ಟು ಪಂಪ್‌ಸೆಟ್‌ಗಳಿಂದ ಹಾಗೂ ಶೇ.5.27ರಷ್ಟು ಇತರ ಮೂಲದಿಂದ ಕಂದಾಯ ಸಂಗ್ರಹವಾಗುತ್ತದೆ.

ಅಭಿವೃದ್ಧಿ ಕೆಲಸಗಳು ಸ್ಥಗಿತ: ಮೆಸ್ಕಾಂ ವ್ಯಾಪ್ತಿಯ ವಿವಿಧೆಡೆ ನಡೆಯುತ್ತಿದ್ದ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿಜೆವೈ), ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ(ಐಪಿಡಿಎಸ್), ಪ್ರಧಾನಮಂತ್ರಿ ಸಹಜ್ ಬಿಜಿಲಿ ಹರ್ ಘರ್ ಯೋಜನೆ ಮೊದಲಾದ ಅಭಿವೃದ್ಧಿ ಯೋಜನೆಯಡಿ ನಡೆಯುತ್ತಿದ್ದ ಕೆಲಸಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸದ್ಯ ತುರ್ತು ಕರೆಗಳಿಗೆ ಮಾತ್ರ ಸಿಬ್ಬಂದಿ ಸ್ಪಂದಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಮೆಸ್ಕಾಂಗೆ ದೊಡ್ಡ ಹೊಡೆತ ಬಿದ್ದಿದೆ. ಬಿಲ್‌ಪಾವತಿಗೆ ಮೂರು ತಿಂಗಳ ಅವಕಾಶಕೊಟ್ಟಿರುವುದರಿಂದ ಕಂದಾಯ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದೇ ಮೊದಲ ಬಾರಿಗೆ ಮೆಸ್ಕಾಂ ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದು, ವಿದ್ಯುತ್ ಖರೀದಿಯ ಮೇಲೂ ಪರಿಣಾಮ ಬೀರಿದೆ. ನಿಯಮಿತವಾಗಿ ಹಣ ಪಾವತಿಸದಿದ್ದರೆ, ಉತ್ಪಾದನಾ ಸಂಸ್ಥೆಗಳು ವಿದ್ಯುತ್ ಸರಬರಾಜು ಮಾಡುವುದಿಲ್ಲ. ಇದರ ಪರಿಣಾಮ ಮತ್ತೆ ಗ್ರಾಹಕರ ಮೇಲೆ ತಟ್ಟಲಿದೆ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಿ ಕಂಪನಿಗೆ ಸಹಾಯಕ್ಕೆ ಮುಂದಾಗಬೇಕಿದೆ.

-ಸ್ನೇಹಲ್ ಆರ್. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ