ಜಿಲ್ಲೆ

ಜಿಲ್ಲಾಸ್ಪತ್ರೆಗೆ 50 ಸಾವಿರ ರೂ. ಮೊತ್ತದ ಇಂಜೆಕ್ಷನ್ ಕೊಡುಗೆ

Chikkamagaluru

ಚಿಕ್ಕಮಗಳೂರು: ಇನ್ನರ್ ವ್ಹೀಲ್ ಕ್ಲಬ್‍ನಿಂದ ಕರೊನಾ ಸೋಂಕಿತರಿಗೆ ಅಗತ್ಯವಿರುವ 50 ಸಾವಿರ ರೂ. ಮೊತ್ತದ ಇಂಜೆಕ್ಷನ್‍ಗಳನ್ನು ಕ್ಲಬ್ ಜಿಲ್ಲಾ ಖಜಾಂಚಿ ಕವಿತಾ ನಿಯತ್ ಜಿಲ್ಲಾಸ್ಪತ್ರೆಗೆ ನೀಡಿದರು.
ನಂತರ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಗೆ ವಿಶೇಷವಾದ ಹೆಪರಿನ್ ಎಂಬ ಚುಚ್ಚುಮದ್ದನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಚುಚ್ಚುಮದ್ದು ಕರೊನಾ ಚಿಕಿತ್ಸೆಯಲ್ಲಿ ಅತ್ಯವಶ್ಯಕ. ಕನಿಷ್ಠ 175 ಕರೊನಾ ಸೋಂಕಿತ ಒಳರೋಗಿಗಳಿಗೆ ಐದು ಡೋಸ್ ನೀಡಲು ಸಹಕಾರಿಯಾಗಲಿದೆ. ಇನ್ನರ್ ವ್ಹೀಲ್ ಜಿಲ್ಲಾ ಘಟಕದ ಜತೆಗೆ ಚಿಕ್ಕಮಗಳೂರು ಹಾಗೂ ಕಳಸ ಘಟಕಗಳೂ ಕೈಜೋಡಿಸಿವೆ ಎಂದು ತಿಳಿಸಿದರು.

ಆಸ್ಪತ್ರೆಯ ಅಗತ್ಯ ಅರಿತು ನೆರವು ಮಾದರಿ:
ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್‍ಕುಮಾರ್ ಮಾತನಾಡಿ, ಮಹಿಳಾ ಸಂಘಟನೆ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಯ ಅಗತ್ಯವನ್ನು ಅರಿತು ನೆರವು ನೀಡುತ್ತಿರುವುದು ಮಾದರಿ. ದಾನಿಗಳಿಂದ ಪಡೆದ ಔಷಧ, ಚುಚ್ಚುಮದ್ದು, ಉಪಕರಣಗಳಿಗೆ ಸ್ವೀಕೃತಿ ನೀಡುವ ಜತೆಗೆ ವೆಬ್‍ಸೈಟ್‍ನಲ್ಲೂ ಪ್ರಕಟಿಸುವ ಮೂಲಕ ಪಾರದರ್ಶಕತೆ ತೋರಲಾಗುತ್ತಿದೆ. ಇದರಿಂದ ಶುದ್ಧ ಮನಸ್ಸಿನ ದಾನಿಗಳಿಗೆ ಕೊಡುಗೆ ನೀಡಲು ಪ್ರೇರಣೆ ಮೂಡಿಸುತ್ತಿದೆ ಎಂದರು. ಇನ್ನರ್ ವ್ಹೀಲ್ ಚಿಕ್ಕಮಗಳೂರು ಘಟಕದ ಅಧ್ಯಕ್ಷೆ ಶ್ರುತಿ ಪೈ ಮತ್ತು ಡಾ.ಕಲ್ಪನಾ, ಐಎಂಎ ಅಧ್ಯಕ್ಷ ಡಾ.ಎ.ಸಿ.ನಿಯತ್ ಇದ್ದರು.