ಜಿಲ್ಲೆ

5 ಸಾವಿರ ಜನಸಂಖ್ಯೆಯಿದ್ದರೂ ಆರೋಗ್ಯ ಕೇಂದ್ರವಿಲ್ಲ : ಐತಿಹಾಸಿಕ ಹಿನ್ನೆಲೆಯ ಗ್ರಾಮ ಕೂಡ್ಲೂರಿನಲ್ಲಿ ಸಮಸ್ಯೆಗಳೂ ಹಲವು

ಇದು ಕಣ್ವ ನದಿಯ ದಡದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮ. ಚನ್ನಪಟ್ಟಣ ತಾಲೂಕಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳ ಪೈಕಿ ಒಂದಾಗಿದೆ. ಇದುವೇ ಕೂಡ್ಲೂರು ಗ್ರಾಮ. ಇಲ್ಲಿನ ಜನಜೀವನ, ಕಾಡುತ್ತಿರುವ ಸಮಸ್ಯೆಗಳು ಹಾಗೂ ಗ್ರಾಮದ ಇತಿಹಾಸದ ಬಗ್ಗೆ ಒಂದು ವರದಿ.

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕಿನಲ್ಲಿಯೇ ಅತಿಹೆಚ್ಚು ದೇಗುಲಗಳನ್ನು ಹೊಂದಿರುವ ಹೆಗ್ಗಳಿಕೆ ಈ ಗ್ರಾಮಕ್ಕಿದೆ. ತಾಲೂಕು ಕೇಂದ್ರದಿಂದ ಕೇವಲ ಐದಾರು ಕಿಮೀ ದೂರದಲ್ಲಿರುವ ಈ ಗ್ರಾಮ ಹಲವು ವೈಶಿಷ್ಟ$್ಯಗಳಿಂದ ಪ್ರಸಿದ್ಧಿ ಪಡೆದಿರುವ ಗ್ರಾಮವೇ ಕೂಡ್ಲೂರು.

ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, 5 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದೆ. ಮೂರು ಸಾವಿರ ಮತದಾರರಿರುವ ಈ ಗ್ರಾಮದಲ್ಲಿ 8 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ವ್ಯವಸಾಯ, ಕೂಲಿ ಹಾಗೂ ವ್ಯಾಪಾರ ಇಲ್ಲಿನ ಜನತೆಯ ಪ್ರಮುಖ ಆಧಾರವಾಗಿವೆ. ಹೈನುಗಾರಿಕೆ ಹಾಗೂ ಬೇಬಿಕಾರ್ನ್​ ಬೆಳೆಯನ್ನು ಸಹ ಇಲ್ಲಿನ ಜನ ನೆಚ್ಚಿಕೊಂಡಿದ್ದಾರೆ.

ಕೂಡ್ಲೂರು ಗ್ರಾಮದ ಸಮಗ್ರ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಬೇಕಿದೆ. ಗ್ರಾಮದ ಜನತೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆಗೆ ಪಕ್ಕದ ಸಂತೇಮೊಗಳ್ಳಿಯನ್ನು ಆಶ್ರಯಿಸಬೇಕಿದೆ. ಆದ್ದರಿಂದ ಗ್ರಾಮದಲ್ಲೇ ಆರೋಗ್ಯ ಉಪಕೇಂದ್ರ ತೆರೆಯಬೇಕು ಎಂಬುದು ಜನತೆಯ ಆಶಯವಾಗಿದೆ.

ಕಿರಿದಾದ ರಸ್ತೆಗಿಲ್ಲ ಮುಕ್ತಿ: ಮುಖ್ಯರಸ್ತೆ ಕಿರಿದಾಗಿರುವುದು ಗ್ರಾಮಕ್ಕೆ ಕಪು$್ಪ ಚುಕ್ಕೆಯಂತೆ ಕಾಡುತ್ತಿದೆ. ಕೆಲ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ರಸ್ತೆಗಳು ಕಾಂಕ್ರೀಟ್​ ಕಂಡಿವೆ. ಆದರೆ, ಗ್ರಾಮದಲ್ಲಿ ಹಾದುಹೋಗಿರುವ ಜಿಲ್ಲಾ ರಸ್ತೆ ಕಿರಿದಾಗಿದ್ದು, ಏಕಕಾಲದಲ್ಲಿ ಎದುರು ಬದರು ಎರಡು ವಾಹನಗಳು ಓಡಾಡಲು ಸಾಧ್ಯವಿಲ್ಲದಂತಾಗಿದೆ. ಈ ರಸ್ತೆಯಲ್ಲಿರುವ ಅಪಾಯಕಾರಿ ತಿರುವಿನಲ್ಲಿ ನಡೆದಿರುವ ಅಪಘಾತಗಳಿಗೆ ಲೆಕ್ಕವಿಲ್ಲವಾಗಿದೆ. ಚನ್ನಪಟ್ಟಣದಿಂದ ಮಳೂರುಪಟ್ಟಣ, ಸುಳ್ಳೇರಿ, ಗರಕಹಳ್ಳಿ ಹಾಗೂ ಇಗ್ಗಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಶಾಲೆಗೆ ಸೂರಿಲ್ಲ, ಗ್ರಾಮಕ್ಕೆ ನೀರಿನ ಟ್ಯಾಂಕ್​ ಇಲ್ಲ: ಗ್ರಾಮದಲ್ಲಿ ಮೂಲಸೌಕರ್ಯಗಳು ಇವೆ. ಆದರೆ, ಗ್ರಾಮದ ಪ್ರಾಥಮಿಕ ಶಾಲೆಗೆ ಸೂರಿಲ್ಲದಿರುವುದು ದುರಂತ. ಶಾಲೆ ಶಿಥಿಲಾವಸ್ಥೆ ತಲುಪಿತ್ತು. ಈ ಕಾರಣದಿಂದ ಸಿಆರ್​ಎಸ್​ ಅನುದಾನದಲ್ಲಿ ನೂತನ ಕಟ್ಟಡ ಕಟ್ಟಲು ಕೆಲ ತಿಂಗಳ ಹಿಂದೆ ಹಳೆಯ ಕಟ್ಟಡವನ್ನು ಕೆಡವಲಾಗಿದೆ. ಆದರೆ, ನೂತನ ಕೊಠಡಿಗಳ ಕಾಮಗಾರಿ ಆರಂಭವಾಗದ ಕಾರಣ, ಮಕ್ಕಳು ಮರದ ನೆರಳಿನಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಇನ್ನು ಗ್ರಾಮಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಓವರ್​ಹೆಡ್​ ಟ್ಯಾಂಕ್​ ಶಿಥಿಲಗೊಂಡ ಕಾರಣ ಅದನ್ನು ಸಹ ಕೆಡವಲಾಗಿದೆ. ಹೊಸ ಟ್ಯಾಂಕ್​ ಇನ್ನೂ ನಿರ್ಮಾಣವಾಗದ ಕಾರಣ ನೀರಿನ ಸಮಸ್ಯೆ ತಲೆದೋರಿದೆ. ತುರ್ತಾಗಿ ಶಾಲಾ ಕಟ್ಟಡ ಹಾಗೂ ಓವರ್​ಹೆಡ್​ ಟ್ಯಾಂಕ್​ ನಿಮಾರ್ಣವಾಗಬೇಕಿದೆ.

ಐತಿಹಾಸಿಕ ಹಿನ್ನೆಲೆ: ಚೋಳರು ಹಾಗೂ ಗಂಗರು, ಹೊಯ್ಸಳರು, ಚಾಲುಕ್ಯರು, ಮೈಸೂರು ಅರಸರು, ಟಿಪ್ಪು ಹಾಗೂ ಹೈದರಾಲಿ ಇವರ ಆಳ್ವಿಕೆಯ ಕಾಲದಲ್ಲಿ ಈ ಗ್ರಾಮ ಪ್ರಮುಖ ಆಗ್ರಹಾರವಾಗಿತ್ತು. ಗಂಗರು ಹಾಗೂ ಚೋಳರ ಆಳ್ವಿಕೆ ಕಾಲದಲ್ಲಿ ದೇವಾಲಯಗಳು ನಿಮಾರ್ಣಗೊಂಡಿರುವ ಇತಿಹಾಸವಿದೆ. ಗ್ರಾಮದ ಮೂಲೆ ಮೂಲೆಯಲ್ಲೂ ಇರುವ ವೀರಗಲ್ಲು, ಮಾಸ್ತಿಗಲ್ಲು ಹಾಗೂ ಶಾಸನಗಳು ಇದಕ್ಕೆ ನಿದರ್ಶನವಾಗಿದೆ. ಗಂಗರ ವಂಶಾವಳಿಯನ್ನು ತಿಳಿಸಿಕೊಡುವ ತಾಮ್ರದ ಶಾಸನ ಈ ಗ್ರಾಮದಲ್ಲಿ ಸಿಕ್ಕಿದೆ. ಇಲ್ಲಿರುವ ಪಂಚಲಿಂಗಗಳು, ರಾಮಮಂದಿರದ ಬಗ್ಗೆಯೂ ಸಾಕಷ್ಟು ಇತಿಹಾಸವಿದೆ. ಎಲ್ಲ ವರ್ಗದ ಜನರು ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿರುವುದು ಗ್ರಾಮದ ವಿಶೇಷ. ಅರಸು ಜನಾಂಗದವರು ಗಣನೀಯವಾಗಿ ವಾಸಿಸುತ್ತಿದ್ದಾರೆ.

ಪಂಚಲಿಂಗ ಕ್ಷೇತ್ರ: ತಲಕಾಡು ಪಂಚಲಿಂಗದಂತೆ ಈ ಗ್ರಾಮದಲ್ಲಿಯೂ ಪಂಚಲಿಂಗಗಳನ್ನು ನೋಡಬಹುದಾಗಿದೆ. ದಕ್ಷಿಣ ಭಾರತವನ್ನು ಗಂಗರಸರು ಆಳುತ್ತಿದ್ದ ವೇಳೆ ಈ ಪ್ರದೇಶವನ್ನು ಮಂಗಳೇಶ ಎಂಬ ಸಾಮಂತರಾಜ ಉಸ್ತುವಾರಿ ನೋಡಿಕೊಳ್ಳುತ್ತಿದ್ದನಂತೆ. ಈತನಿಗೆ ಗಂಗರಸರ ವಂಶದ ಹೆಣ್ಣು ಮಗಳನ್ನು ಮದುವೆ ಮಾಡಿಕೊಡಲಾಗಿತ್ತಂತೆ. ಈ ಹೆಣ್ಣು ಮಗಳು ಪಂಚಲಿಂಗ ದರ್ಶನ ಮಾಡಲು ಆಗಾಗ ತಲಕಾಡಿಗೆ ತೆರಳುತ್ತಿದ್ದು ಈ ಸಾಮಂತರಾಜನ ಕೋಪಕ್ಕೆ ಕಾರಣವಾಯಿತು. ವಿಚಾರ ತಿಳಿದ ಅಂದಿನ ಗಂಗರ ಅರಸನು ತನ್ನ ಮಗಳ ಗ್ರಾಮದಲ್ಲಿಯೇ 5 ಲಿಂಗಗಳನ್ನು ಪ್ರತಿಷ್ಠಾಪಿಸಿ ತಲಕಾಡಿನಷ್ಟೇ ಮಹತ್ವವಿರುವ ಪಂಚಲಿಂಗ ಕ್ಷೇತ್ರ ನಿರ್ಮಿಸಿದರೆಂಬ ಇತಿಹಾಸವಿದೆ. ಮಂಗಳೇಶ್ವರ, ಪಾತಾಳೇಶ್ವರ, ಮಹಾಬಲೇಶ್ವರ, ಮರುಳೇಶ್ವರ ವೈದ್ಯನಾಥೇಶ್ವರ ಎಂಬ ಪಂಚಲಿಂಗ ದೇವಸ್ಥಾನಗಳು ಊರ ಮುಂಭಾಗವಿದೆ. ಇದರ ಪಕ್ಕದಲ್ಲಿರುವ ಕಲ್ಯಾಣಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಸ್ಥಳದಲ್ಲಿ ಹಳೆಗನ್ನಡ ಹಾಗೂ ತಮಿಳು ಭಾಷೆಯಲ್ಲಿರುವ ಶಾಸನಗಳನ್ನು ಕಾಣಬಹುದಾಗಿದೆ.

ಗ್ರಾಮಕ್ಕೆ ಪುರಾತನ ಇತಿಹಾಸವಿದೆ. ನಾನು ಸಹ "ಕೂಡ್ಲೂರು ಒಂದು ಜನಪದೀಯ ಅಧ್ಯಯನ' ಎಂಬ ವಿಚಾರದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದೇನೆ. ಗಂಗರ ವಂಶಾವಳಿಯನ್ನು ತಿಳಿಸಿಕೊಟ್ಟ ತಾಮ್ರ ಶಾಸನ ದೊರಕಿದ್ದೆ ನಮ್ಮ ಗ್ರಾಮದಲ್ಲಿ. ಈ ಪುರಾತನ ಗ್ರಾಮದ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಡಾ. ಕೂಡ್ಲೂರು ವೆಂಕಟಪ್ಪ, ವಿಶ್ರಾಂತ ಪ್ರಾಂಶುಪಾಲ, ಸಾಹಿತಿ ತಾಲೂಕಿನಲ್ಲಿಯೇ ಅತಿಹೆಚ್ವು ಗುಡಿ ದೇಗುಲಗಳನ್ನು ಹೊಂದಿರುವ ಹೆಗ್ಗಳಿಕೆ ಗ್ರಾಮಕ್ಕೆ ಸಲ್ಲುತ್ತದೆ. ಇಲ್ಲಿನ ದೇವಾಲಯಗಳು ಹಾಗೂ ಶಾಸನ ಹಾಗೂ ವೀರಗಲ್ಲು, ಮಾಸ್ತಿಗಲ್ಲುಗಳನ್ನು ಸಂರಕ್ಷಿಸಬೇಕಾಗಿದೆ. ಗ್ರಾಮದ ಪ್ರಮುಖ ರಸ್ತೆ ಹಾಗೂ ಪ್ರಾಥಮಿಕ ಶಾಲೆಯ ಕಟ್ಟಡ ಸೇರಿ ಹಲವು ಸಮಸ್ಯೆಗಳಿದ್ದು, ಸಂಬಂಧಪಟ್ಟವರು ಬಗೆಹರಿಸಬೇಕು. ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆ ಹೆಚ್ಚಾಗಿದೆ. ಅವರಿಗಾಗಿ ಗುಡಿ ಕೈಗಾರಿಕೆ ಸೇರಿ ಆರ್ಥಿಕ ಗುಣಮಟ್ಟ ಹೆಚ್ಚಿಸುವ ಕೆಲಸವಾಗಬೇಕಿದೆ. ಲಕ್ಷಿ$್ಮ ಕಿಶೋರ್​ ಅರಸು, ಯುವಕವಿ, ಸ್ನಾತಕೋತ್ತರ ವಿದ್ಯಾರ್ಥಿ ಗ್ರಾಮದ ಒಳ ರಸ್ತೆಗಳು ಚರಂಡಿಗಳು ಅಭಿವೃದ್ಧಿ ಕಂಡಿವೆ. ಓವರ್​ಹೆಡ್​ ಟ್ಯಾಂಕ್​ ಇಲ್ಲದ ಕಾರಣ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಗ್ರಾಮದ ಮುಖ್ಯರಸ್ತೆಯ ಅಗಲೀಕರಣ ತುರ್ತಾಗಿ ಆಗಬೇಕಿದೆ. ಶಾಸಕರ ಗಮನಕ್ಕೂ ತರಲಾಗಿದೆ. ತುರ್ತಾಗಿ ಶಾಲಾ ಕಟ್ಟಡ ಆರಂಭಿಸುವಂತೆಯೂ ಸಂಬಂಧಪಟ್ಟವರನ್ನು ಒತ್ತಾಯಿಸಲಾಗಿದೆ. ಒತ್ತಾಯ ಮಾಡಲಾಗಿದೆ. ಗೋವಿಂದೇಗೌಡ, ಕೂಡ್ಲೂರು ಗ್ರಾಪಂ ಅಧ್ಯಕ್ಷ