ದೊಡ್ಡಬಳ್ಳಾಪುರ: 5 ವರ್ಷದೊಳಗೆ 25 ಕಿಮೀ ಉದ್ದ 10 ಕಿಮೀ ಅಗಲದ ಗ್ರೀನ್ ಕಾರಿಡಾರ್ ನಿರ್ಮಾಣದ ಗುರಿ ಹೊಂದಿದ್ದೇವೆ ಎಂದು ಸಮಾಜ ಸೇವಕ ಹಾಗೂ ಪರಿಸರ ಪ್ರೇಮಿ ತಿಮ್ಮಾರೆಡ್ಡಿ ತಿಳಿಸಿದರು.
ತಾಲೂಕಿನ ಧಾರ್ಮಿಕ ಕ್ಷೇತ್ರ ಹುಲುಕುಡಿ ವೀರಭದ್ರಸ್ವಾಮಿ ಬೆಟ್ಟದಲ್ಲಿ ಪೀಪಲ್ಸ್ ಟ್ರಸ್ಟ್, ರೋಟರಿ ಕ್ಲಬ್, ವಿವಿಧ ಟ್ರಸ್ಟ್ ಹಾಗೂ ೌಂಡೇಷನ್ ಸಹಕಾರದೊಂದಿಗೆ ಶನಿವಾರ ಕೋಟಿ ವೃಕ್ಷ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ಮಾನತನಾಡಿದರು.
ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಅವರ ಬಳಿ ಈ ಅಭಿಯಾನದ ಬಗ್ಗೆ ಚರ್ಚಿಸಿದ್ದು, ಅವರ ಮಾರ್ಗದರ್ಶನದಲ್ಲಿ ಈ ಮಹಾ ಅಭಿಯಾನಕ್ಕೆ ಕೈ ಹಾಕಿದ್ದೇವೆ. ಈ ಮೂಲಕ ಇಲ್ಲಿನ ಅಂತರ್ಜಲ ವೃದ್ಧಿ ಸೇರಿ ರೈತರಿಗೆ ಕೃಷಿ ಉತ್ತೇಜಿತವಾಗಿ ಅಭಿಯಾನ ಸಾಗಲಿದೆ ಎಂದರು.
ಈ ಭಾಗದ ಗೋಮಾಳ, ಸರ್ಕಾರಿ ಖರಾಬ, ಇತರ ಸರ್ಕಾರಿ ಭೂಮಿಗಳಲ್ಲಿ ಹಾಗೂ ಹುಲುಕುಡಿ ಬೆಟ್ಟ, ರಸ್ತೆಗಳ ಬದಿಯಲ್ಲಿ ಕಾಡು ನಿರ್ಮಾಣವಾಗಲಿದೆ. ರೈತರ ಹೊಲಗಳ ಬದುಗಳಲ್ಲಿಯೂ ವೃಕ್ಷ ನೆಟ್ಟು ಬೆಳೆಸಲು ಚಿಂತಿಸಲಾಗಿದೆ ಎಂದರು.
ಇದಕ್ಕೆ ಕಂದಾಯ ಇಲಾಖೆ ಸಹಕಾರವೂ ಬೇಕಿದೆ. ಅಲ್ಲದೆ ಮಾಕಳಿ ಬೆಟ್ಟ, ಘಾಟಿ ಸುಬ್ರಮಣ್ಯದ ಬೆಟ್ಟದ ಸಾಲಿನಲ್ಲೂ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ನೆಡುವ ಕೋಟಿ ವೃಕ್ಷಗಳನ್ನು ಕಾಪಾಡುವಲ್ಲಿ ಬೃಹತ್ ಯುವ ಪಡೆಯನ್ನು ವೇತನ ನೀಡಿ ಸಿದ್ಧಪಡಿಸಿಕೊಂಡಿದ್ದೇವೆ. ಈ ಅಭಿಯಾನದ ಫಲಿತಾಂಶ ದೇಶದ್ಯಾಂತ ಮಾದರಿ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಹುಲುಕುಡಿ ವೀರಭದ್ರಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಸದಸ್ಯ ಚನ್ನೇಗೌಡ ಮಾತನಾಡಿ, ಹುಲಿಕುಡಿ ಬೆಟ್ಟಕ್ಕೆ ಚೋಳರ ಕಾಲದ ಐತಿಹ್ಯ ಇದ್ದು, ಸುಮಾರು 500 ವರ್ಷಗಳ ಧಾರ್ಮಿಕ ಹಿನ್ನೆಲೆ ಇದೆ. ಇದು ಉತ್ತಮ ಪ್ರವಾಸಿ ತಾಣವಾಗಿದ್ದು, ಕೋಟಿ ವೃಕ್ಷ ಅಭಿಯಾನದಿಂದ ಇಲ್ಲಿ ಸಮೃದ್ಧ ಕಾಡು ನಿರ್ಮಾಣವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆ ಇದ್ದು, ಇದಕ್ಕೆ ಟ್ರಸ್ಟ್ ಸಂಪೂರ್ಣ ಬೆಂಬಲ ಇದೆ ಎಂದರು.
ಅಭಿಯಾನದಲ್ಲಿ ರೋಟರಿ ಕ್ಲಬ್, ಡಿಎನ್‌ಎ ಫೌಂಡೇಷನ್, ಶ್ರೀರಾಮನಹಳ್ಳಿ ಪೀಪಲ್ ಟ್ರಸ್ಟ್, ಹ್ಯಾಪಿ ವರ್ಡ್ ಫೌಂಡೇಷನ್ ಕೈ ಜೋಡಿಸಿದ್ದವು. ರಾಜಾನುಕುಂಟೆ ಶ್ರೀಸಾಯಿ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ತಿಮ್ಮಾರೆಡ್ಡಿ ಸೇನೆಯ ಯುವಕರು ಸುಮಾರು 7-8 ಅಡಿಗಳ 560 ಸಸಿ ನೆಟ್ಟರು.
ಪೀಪಲ್ಸ್ ಟ್ರಸ್ಟ್ ಮುಖ್ಯಸ್ಥ ಹರೀಶ್ ನಾಣಯ್ಯ, ಜಿಕೆವಿಕೆ ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ ಶಶಿಧರ್, ಪರಿಸರ ಪ್ರೇಮಿ ಮಾರಸಂದ್ರ ಜ್ಯೋತಿಪ್ರಕಾಶ್ ಇದ್ದರು.