ಜಿಲ್ಲೆ

5 ಲಕ್ಷ ರೂ.ವರೆಗೆ ಆರೋಗ್ಯ ಉಚಿತ ಸೇವೆ

ಬೇಲೂರು: ಬಿಪಿಎಲ್ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಹೊಂದಿರುವ ಬಡವರು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಆರೋಗ್ಯ ಉಚಿತ ಸೇವೆ ಪಡೆಯಬಹುದಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಆರೋಗ್ಯ ಮಿತ್ರ ರುದ್ರೇಶ್ ಹೇಳಿದರು.


ತಾಲೂಕಿನ ಅರೇಹಳ್ಳಿ ಪಟ್ಟಣದ ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಗ್ರಾಮದ ನಿವಾಸಿಗಳಿಗೆ ಸರ್ಕಾರದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.


ರೋಗಿಗಳು ಕಾಯಿಲೆಗಳಿಗೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ದಾಖಲಾಗಬಾರದು. ಬದಲಾಗಿ ಸರ್ಕಾರಿ ವೈದ್ಯರ ಸಲಹೆ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಮಾತ್ರ ಯೋಜನೆಯ ಲಾಭ ಪಡೆಯಲು ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 2018ರಿಂದ ಈ ಯೋಜನೆ ಚಾಲನೆಗೊಂಡಿದ್ದು, ಯಾವುದೇ ಕಾರಣಕ್ಕೂ ಕಾಯಿಲೆಗಳನ್ನು ನಿರ್ಲಕ್ಷಿಸದೇ ಚಿಕಿತ್ಸೆ ಪಡೆಯಬೇಕು. ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಲಾಭ ಪಡೆಯಬೇಕು. ಈ ಯೋಜನೆಯಡಿ ಈಗಾಗಲೇ 1,650 ಕಾಯಿಲೆಗಳಿಗೆ ಉಚಿತವಾಗಿ ಬಿಪಿಎಲ್ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಹೊಂದಿರುವ ಜನರು ಚಿಕಿತ್ಸೆ ಪಡೆದು ಕೊಳ್ಳಬಹುದಾಗಿದೆ ಎಂದರು.


ಈ ವೇಳೆ 150 ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗೆ ಹೆಸರನ್ನು ನೋಂದಾಯಿಸಿಕೊಂಡರು. 68 ಜನರಿಗೆ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮಾಡಲಾಯಿತು. ಡಾ.ಆಯೇಶಾ, ಸಿಬ್ಬಂದಿ ನಟೇಶ್, ರಮ್ಯಾ, ಉಮಾ, ರಾಧಿಕಾ, ಜ್ಯೋತಿ, ಚೇತನ್ ಶಮೀಮ್ ಇತರರಿದ್ದರು.

ಬೇಲೂರು ತಾಲೂಕಿನ ಅರೇಹಳ್ಳಿಯ ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಆರೋಗ್ಯ ಮಿತ್ರ ಸಿಬ್ಬಂದಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.