ಜಿಲ್ಲೆ

5 ಲಕ್ಷ ರೂ. ಅನುದಾನಕ್ಕೆ ತಡೆಹಿಡಿಯಲು ಒತ್ತಾಯ

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನ ದಾವೂದ್ ಷಾ ಮಕಾನ್ ದರ್ಗಾಕ್ಕೆ ಕಾಂಪೌಂಡ್ ನಿರ್ಮಾಣ ಹೆಸರಿನಲ್ಲಿ ವ್ಯಕ್ತಿಯೊಬ್ಬರು ದುರುದ್ದೇಶದಿಂದ ವಕ್ಫ್ ಬೋರ್ಡ್‌ನಿಂದ 5 ಲಕ್ಷ ರೂ. ಅನುದಾನ ಪಡೆಯುತ್ತಿದ್ದು, ಇದನ್ನು ವಕ್ಫ್ ತಡೆಹಿಡಿಯಬೇಕು ಎಂದು ಮುಸ್ಲಿಂ ಯುವಕರು ಆಗ್ರಹಿಸಿದರು.


ಮುಸ್ಲಿಂ ಯುವ ಮುಖಂಡರಾದ ಮುಜೀಬ್ ಪಾಷ ಹಾಗೂ ವಸೀಮ್ ನೇತೃತ್ವದ ಯುವಕರು ರಾಜ್ಯ ವಕ್ಫ್ ಬೋರ್ಡ್‌ನ ಮಂಡ್ಯ ಜಿಲ್ಲಾ ಚೇರ್ಮನ್ ಜಬೀಉಲ್ಲಾ ಹಾಗೂ ಜಿಲ್ಲಾ ಅಧಿಕಾರಿ ಮುಸ್ತಾಕ್ ಅಹಮದ್ ಅವರನ್ನು ಪಟ್ಟಣದಲ್ಲಿ ಭೇಟಿಯಾಗಿ ಸಮಸ್ಯೆ ಸಂಬಂಧ ಗಮನ ಸೆಳೆದು ಬಳಿಕ ಮನವಿ ಸಲ್ಲಿಸಿದರು.


ನಂತರ ಯುವ ಮುಖಂಡ ಮುಜೀಬ್ ಪಾಷ ಮಾತನಾಡಿ, ಗಂಜಾಂನ ಹೊರವಲಯದಲ್ಲಿರುವ ದಾವೂದ್ ಷಾ ಮಕಾನ್ ದರ್ಗಾ ಸಂರಕ್ಷಣೆಗಾಗಿ ಈಗಾಗಲೇ ಸುತ್ತಲು ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಆದರೆ ಗಂಜಾಂನ ಸಲೀಂ ಎಂಬುವರು ತಮ್ಮ ಪ್ರಭಾವ ಬಳಸಿ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್ ಅವರನ್ನು ಸಂಪರ್ಕಿಸಿ ದರ್ಗಾದ ಕುರಿತು ತಪ್ಪು ಮಾಹಿತಿ ನೀಡಿ ಪುನಃ ಕಾಂಪೌಂಡ್ ನಿರ್ಮಾಣ ಮಾಡುವ ಕಾರಣ ನೀಡಿ, ವಕ್ಫ್ ಬೋರ್ಡಿನಿಂದ 5 ಲಕ್ಷ ರೂ. ಬಿಡುಗಡೆಗಾಗಿ ಸಚಿವರ ಕೈಯಿಂದಲೇ ಅನುದಾನ ಪತ್ರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.


ಹೀಗಾಗಿ ವಕ್ಫ್ ಬೋರ್ಡ್ ಈ ಬಗ್ಗೆ ಪರಿಶೀಲಿಸಿ ಅಗತ್ಯ ಮಾಹಿತಿ ಪಡೆಯಬೇಕು. ಜತೆಗೆ ಅನುದಾನ ದುರ್ಬಳಕೆಗೆ ಅವಕಾಶ ನೀಡದೆ ತಡೆಹಿಡಿಯಬೇಕು. ಈ ಬಗ್ಗೆ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಬಳಿಯೂ ಮನವಿ ಮಾಡಿದ್ದು, ಈ ಬಗ್ಗೆ ಕ್ರಮವಹಿಸಿ ನ್ಯಾಯ ಒದಗಿಸಬೇಕು ಎಂದರು. ಅಕ್ರಮ್, ಖಾಸೀಮ್, ನಸ್ರುಲ್ಲಾ, ಸನಾ, ಇಫ್ತೀಕಾರ್, ಅಫ್ಸರ್ ಸೇರಿದಂತೆ ಇತರರಿದ್ದರು.