ಜಿಲ್ಲೆ

5 ದಿನಗಳ ಗಣೇಶ ವಿಗ್ರಹಗಳಿಗೆ ವಿದಾಯ

ಹುಬ್ಬಳ್ಳಿ: ಐದು ದಿನಗಳ ಕಾಲ ಸಾವಿರಾರು ಜನರಿಗೆ ದರ್ಶನ ಭಾಗ್ಯ ನೀಡಿ ಭಕ್ತಾದಿಗಳಲ್ಲಿ ಆನಂದ-ಸಂತೋಷ ಉಂಟುಮಾಡಿದ ಇಲ್ಲಿಯ ಅನೇಕ ಸಾರ್ವಜನಿಕ ಸಮಿತಿಗಳ ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ಸರಳ ರೀತಿಯಿಂದ ಕಳುಹಿಸಿಕೊಡಲಾಯಿತು.

ದುರ್ಗದಬೈಲಿನಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ಆಯೋಜಿಸಿದ್ದ ಸಮಾರಂಭವನ್ನು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿಯವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರದ ಆದೇಶಗಳನ್ನು ಪಾಲಿಸಿ ಗಜಾನನೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಹುಬ್ಬಳ್ಳಿಯ ಗಣೇಶೋತ್ಸವ ನಾಡಿನಲ್ಲಿ ವಿಶಿಷ್ಟ ಸ್ಥಾನ ಗಳಿಸಿಕೊಂಡಿದೆ. ಪ್ರಸ್ತುತ ಕಾಡುತ್ತಿರುವ ಕರೊನಾ ರೋಗ ಅತಿ ಶೀಘ್ರವಾಗಿ ನಿಮೂಲನೆಯಾಗಲಿ. ಬರುವ ವರ್ಷ ವಿಜೃಂಭಣೆಯಿಂದ ಉತ್ಸವ ಆಚರಿಸುವಂತಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಗಣೇಶೋತ್ಸವ ಮಂಡಳದ ಅಧ್ಯಕ್ಷ ಸುರೇಶ ರೇವಣಕರ ಅಧ್ಯಕ್ಷತೆ ವಹಿಸಿದ್ದರು. ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಸಂಗೀತಾ ಇಜಾರದ, ರೂಪಾ ಅಂಗಡಿ, ಅಮರೇಶ ಹಿಪ್ಪರಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಾಬಣ್ಣ ಪವಾರ, ಅಶೋಕ ಹರಕಚಂದ, ಮಹೇಶ ಗೌಳಿ, ವಾಮನ ಕೊಳೇಕರ, ಆನಂದ ಮೂಲಿಮನಿ ಮುಂತಾದವರು ಇದ್ದರು. ಚನ್ನಬಸಪ್ಪ ಧಾರವಾಡಶೆಟ್ರು ಸ್ವಾಗತಿಸಿದರು. ಎಸ್.ಎಸ್. ಕಮಡೊಳ್ಳಿಶೆಟ್ರು ವಂದಿಸಿದರು. ನಂತರ ಗಾಜಿನ ಮನೆ ಪಕ್ಕದ ಬಾವಿ ಹಾಗೂ ಹೊಸೂರಿನ ದೊಡ್ಡ ಕೆರೆಗೆ ಮೂರ್ತಿಗಳನ್ನು ಕೊಂಡೊಯ್ದು ಬಿಡಲಾಯಿತು.