ಜಿಲ್ಲೆ

5 ಯೋಜನೆ 5 ವರ್ಷವೂ ಗ್ಯಾರಂಟಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಮೈಸೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಐದೂ ವರ್ಷ ಮುಂದುವರಿಯುವುದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.


ಗ್ಯಾರಂಟಿ ಯೋಜನೆಗಾಗಿ 2023-24ನೇ 36 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಮುಂದಿನ ಸಾಲಿಗೆ 57 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಬಡವರ ಕೈಗೆ ದುಡ್ಡು ಕೊಡುತ್ತಿರುವುದರಿಂದ ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕೆ ಸುಳ್ಳು ಹೇಳುತ್ತಿದೆ. ಲೋಕಸಭಾ ಚುನಾವಣೆ ಬಳಿಕವೂ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ. ಇದರಲ್ಲಿ ಒಂದೇ ಒಂದು ಯೋಜನೆ ಸಹ ಸ್ಥಗಿತವಾಗಲ್ಲ. ಯಾವುದೇ ರೀತಿಯ ಸಂಶಯವೇ ಬೇಡ ಎಂದು ಆಶ್ವಾಸನೆ ನೀಡಿದರು.


ಬೆಲೆ ಏರಿಕೆಯಿಂದ ಬಡವರ ಜೀವನ ಕಷ್ಟಕರವಾಗಿದೆ. ಅವರ ಕೈಯಲ್ಲಿ ದುಡ್ಡಿಲ್ಲ. ಕೊಂಡುಕೊಳ್ಳುವ ಶಕ್ತಿಯೂ ಕಡಿಮೆಯಾಗಿದೆ. ಅದಕ್ಕಾಗಿ ಅವಕಾಶ ವಂಚಿತರಾದ ದಲಿತರು, ಬಡವರು, ಕಾರ್ಮಿಕರು, ಮಹಿಳೆಯರು, ಅಲ್ಪಸಂಖ್ಯಾತರು, ರೈತರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.


ಯುವ ನಿಧಿ ಯೋಜನೆ ಮೂಲಕ ನಿರುದ್ಯೋಗಿ ವಿದ್ಯಾವಂತರಿಗೆ ಆರ್ಥಿಕ ನೆರವು ನೀಡಲಾಗಿದೆ. ಅವರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸಿಕೊಡಲು ಕ್ರಮ ವಹಿಸಲಾಗುವುದು. ಆದರೆ, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ’ ಎಂಬ 2014ರಲ್ಲಿ ನೀಡಿದ್ದ ನರೇಂದ್ರ ಮೋದಿ ಅವರ ಭರವಸೆ ಈಡೇರಿದೆಯೇ? ಇಲ್ಲ. ಬರೀ ಸುಳ್ಳು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ‘ಅಚ್ಛೇ ದಿನ್’ ಬಂದು ಬಿಟ್ಟಿದೆಯೇ? ದೇಶಕ್ಕೆ ಕಪ್ಪು ಹಣ ಬಂತಾ? ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕಿದ್ದಾರೆಯೇ? 15 ಲಕ್ಷ ಇರಲಿ, 15 ಪೈಸೆನಾದರೂ ಯಾರಿಗಾದರೂ ಹಾಕಿದ್ದಾರಾ? ಸಬ್ ಕಾ ವಿಕಾಸ್ ಆಗಿದೆಯೇ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದರು.

ಹಸಿವು, ಬಡತನ ನಿವಾರಿಸುವ ಕಾರ್ಯಕ್ರಮ


ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳು ರಾಜಕೀಯ ಕಾರ್ಯಕ್ರಮವಲ್ಲ, ಜನರ ಹಸಿವು, ಬಡತನ ನಿವಾರಿಸುವ ಕಾರ್ಯಕ್ರಮಗಳು ಎಂದು ಹೇಳಿದರು.


ಗ್ಯಾರಂಟಿ ಯೋಜನೆ ನೀಡಿದ್ದರಿಂದ ಅಭಿವೃದ್ಧಿ ಮಾಡಲಾಗುತ್ತಿಲ್ಲ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ. ಆದರೆ, ನಾವು ಮಾಡುತ್ತಿರುವ ಈ ಕೆಲಸ ರಾಜಕೀಯ ಪ್ರೇರಿತವಲ್ಲ. ಸಂವಿಧಾನದಲ್ಲಿ ಇರುವಂತೆಯೇ ಸಂಪತ್ತು ಎಲ್ಲರಿಗೂ ಸಮವಾಗಿ ವಿತರಣೆಯಾಗಬೇಕು. ಅಸಮಾನತೆ ತೊಲಗಬೇಕು. ಸಮಸಮಾಜದ ನಿರ್ಮಾಣವಾಗಬೇಕು ಎಂಬುದು ನಮ್ಮ ಸರ್ಕಾರದ ಆಶೋತ್ತರವಾಗಿದೆ ಎಂದರು.


ಸಂವಿಧಾನದ ನಿರ್ದೇಶನದಂತೆ ಆಡಳಿತ ನಡೆಸಿ ದೇಶವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ದು ಬಡತನ ನಿವಾರಣೆ ಮಾಡಿ ಪ್ರತಿಯೊಂದು ಕುಟುಂಬವು ಸ್ವಾಭಿಮಾನ, ಘನತೆಯಿಂದ ಸ್ವಾವಲಂಬಿ ಬದುಕನ್ನು ನಡೆಸಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಕಾರ್ಯಕ್ರಮ ಜಾರಿ ಮಾಡಲಾಗಿದೆ. ನಮ್ಮ ಸರ್ಕಾರ ಬಡವರು, ದೀನ ದಲಿತರು ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಕಾರ್ಮಿಕರು ಹಾಗೂ ರೈತರ ಪರವಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಚಾಲ್ತಿ


ಪಶು ಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಇರುತ್ತವೆ. ಯಾವುದೇ ಕಾರಣಕ್ಕೂ ಸ್ಥಗಿತವಾಗಲ್ಲ. ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಇರಲ್ಲ ಎಂದು ಪ್ರತಿಪಕ್ಷಗಳು ಸುಳ್ಳು ಹೇಳುತ್ತಿವೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದರೊಂದಿಗೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಸರ್ಕಾರ ಬದ್ಧ ಎಂದರು.


ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಕೆ.ಹರೀಶ್ ಗೌಡ, ಡಿ.ರವಿಶಂಕರ್, ಎ.ಆರ್. ಕೃಷ್ಣಮೂರ್ತಿ, ಎಂಎಲ್‌ಸಿಗಳಾದ ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರ್‌ನಾಥ್, ಸೂರಜ್ ಹೆಗ್ಡೆ, ವರುಣಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಕೆ.ಮರಿಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.