ಹರಿಹರ: ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತ ಇಬ್ಬರಿಗೆ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ತಲಾ 30 ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶಿಸಿದೆ.
ಚನ್ನಗಿರಿ ತಾಲೂಕು ನವಿಲೆಹಾಳು ಗ್ರಾಮದ ಹನುಮಂತಪ್ಪ, ಶಾಂತ ಅಪರಾಧಿಗಳು.
2019ರ ಜೂನ್ 19ರಂದು ಹರಿಹರ ವಾರದ ಸಂತೆಯಲ್ಲಿ ತೆಂಗಿನಕಾಯಿ ವ್ಯಾಪಾರಿ ಫಕೃಸಾಬ್ ಇವರಿಗೆ 2000 ರೂ. ಮುಖಬೆಲೆಯ ನೋಟು ನೀಡಲು ಬಂದಿದ್ದರು. ಅನುಮಾನಗೊಂಡ ಫಕೃಸಾಬ್ ಬೇರೆ ನೋಟು ಕೇಳಲಾಗಿ, ಆಗ 500 ರೂ. ನೋಟು ನೀಡಿದ್ದರು. ಅದೂ ಸಹ ಖೋಟ ನೋಟು ಎಂದು ಗೊತ್ತಾಗಿದ್ದರಿಂದ ಫಕೃಸಾಬ್ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ತಿಳಿಸಿದ್ದರು.
ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಆರೋಪಿಗಳಿಂದ 1.31 ಲಕ್ಷ ರೂ.ಮೌಲ್ಯದ ಖೋಟಾ ನೋಟುಗಳು, ಕಲರ್ ಪ್ರಿಂಟರ್ ವಶಪಡಿಸಿಕೊಂಡಿದ್ದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪ ಸಾಬೀತಾಗಿದ್ದರಿಂದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್ ಕುಮಾರ್ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ವಾದ ಮಂಡಿಸಿದ್ದ ಸರ್ಕಾರಿ ವಕೀಲ ಜಯ್ಯಪ್ಪ, ತನಿಖಾಧಿಕಾರಿಗಳಾದ ಸಿಪಿಐ ಐ.ಎಚ್. ಗುರುನಾಥ್, ಸಿಬ್ಬಂದಿಯ ಪ್ರಯತ್ನಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.