ಸಹಾಯಧನ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಲಕ್ಕಪ್ಪ ಬಿಜ್ಜನವರ, ಬೆನಕಪ್ಪ ಯೋಗಿಯರ, ಮೀರಾಸಾಬ ಗೊರೆಕಣ್ಣ, ಯಶೋದಾ ಮಾರಿಹಾಳ, ಶಾಂತಾ, ಭರತ ಹಂಚಿನಮನಿ ಇತರರು ಇದ್ದರು. 
ಜಿಲ್ಲೆ

5 ಸಾವಿರ ಸಹಾಯಧನ ವಿತರಣೆ ಮಾಡಿ

ಬೆಳಗಾವಿ: ಕೋವಿಡ್-19ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ತಕ್ಷಣ 5 ಸಾವಿರ ರೂ. ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಶುಕ್ರವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಲಾಕ್‌ಡೌನ್‌ನಿಂದ ಉದ್ಯೋಗ, ಆದಾಯವಿಲ್ಲದೆ ಸಂಕಷ್ಟದಲ್ಲಿರುವ ಬಡ ಕಾರ್ಮಿಕ ಕುಟುಂಬಗಳಿಗೆ ಸರ್ಕಾರ 5 ಸಾವಿರ ರೂ. ಸಹಾಯಧನ ಘೋಷಣೆ ಮಾಡಿತ್ತು. ಆದರೆ, ಎರಡು ತಿಂಗಳು ಕಳೆದರೂ ಕಾರ್ಮಿಕರ ಬ್ಯಾಂಕ್ ಖಾತೆಗೆ ಸಹಾಯಧನ ಜಮಾ ಆಗಿಲ್ಲ. ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಈಗಾಗಲೇ ಜಿಲ್ಲೆಯಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರು, ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದಿದ್ದಾರೆ. ಆದರೆ, ಸರ್ಕಾರದಿಂದ ಸಿಗಬೇಕಿದ್ದ ಸಹಾಯಧನ ಸಿಗುತ್ತಿಲ್ಲ. ಹೀಗಾಗಿ ಕೆಲ ಕಾರ್ಮಿಕರು ಈ ಸೌಲಭ್ಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ನಿತ್ಯ ಅಲೆದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲಕ್ಕಪ್ಪ ಬಿಜ್ಜನವರ, ಬೆನಕಪ್ಪ ಯೋಗಿಯರ, ಮೀರಾಸಾಬ ಗೊರೆಕಣ್ಣ, ಯಶೋದಾ ಮಾರಿಹಾಳ, ಶಾಂತಾ, ಭರತ ಹಂಚಿನಮನಿ ಇನ್ನಿತರರು ಇದ್ದರು.

ಆಹಾರ ಕಿಟ್ ವಿತರಿಸಿ: ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಎಲ್ಲ ಕಾರ್ಮಿಕರಿಗೆ 5 ಸಾವಿರ ರೂ. ಸಹಾಯಧನ ಸಿಗಬೇಕು. ಪ್ರತಿ ಕಾರ್ಮಿಕನಿಗೆ ಆಹಾರ ಕಿಟ್ ವಿತರಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟಿಸಿದರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರೆಯುವ ಆರ್ಥಿಕ ಸೌಲಭ್ಯ ಎಲ್ಲ ಕಾರ್ಮಿಕರಿಗೂ ದೊರೆಯಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ಕ್ರಮ ವಹಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಸಿದರು.

ಜಿಲ್ಲಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಮುಖಂಡ ಎನ್.ಆರ್. ಲಾತೂರ, ಸುನೀಲ ಗಾವಡೆ, ಯಶವಂತ ಲಮಾಣಿ, ರೋಹಿತ್ ಲಾತೂರ, ಮಾರುತಿ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.