ಜಿಲ್ಲೆ

ಪಂಚ ಪಾಲಿಕೆ ಚುನಾವಣೆ, ಪಕ್ಷಗಳಲ್ಲಿ ಸಿದ್ಧತೆ ಆರಂಭ

ಆರ್​​.ತುಳಸಿಕುಮಾರ್​​

ಬೆಂಗಳೂರು: ರಾಜಧಾನಿಯಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ಪಂಚ ನಗರ ಪಾಲಿಕೆಗಳಲ್ಲಿ ಚುನಾಯಿತ ಆಡಳಿತವನ್ನು ಸ್ಥಾಪಿಸುವ ಸಂಬಂಧ ವಿವಿಧ ರಾಜಕೀಯ ಪಕ್ಷಗಳಲ್ಲಿ ಎಲೆಕ್ಷನ್ ಎದುರಿಸಲು ಸಿದ್ಧತೆ ಆರಂಭಗೊಂಡಿದೆ. ಈ ಸಂಬಂಧ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಪ್ರಮುಖ ಪಕ್ಷಗಳು ತಮ್ಮದೇ ನೆಲೆಗಟ್ಟಿನಲ್ಲಿ ಚುನಾವಣೆ ತಂತ್ರಗಾರಿಕೆ ರೂಪಿಸುವಲ್ಲಿ ನಿರತವಾಗಿವೆ.

ನಿಕಟಪೂರ್ವ ಬಿಬಿಎಂಪಿಯನ್ನು ವಿಂಗಡಿಸಿ ಹೊಸದಾಗಿ ರಚಿಸಿರುವ ಕಾರ್ಪೋರೇಷನ್‌ಗೆ ಚುನಾವಣೆ ನಡೆಯುತ್ತದೆಯೋ, ಇಲ್ಲವೊ ಎಂಬ ದ್ವಂದ್ವ ಉಂಟಾಗಿತ್ತು. ಪಾಲಿಕೆಗಳ ರಚನಾ ಪ್ರಕ್ರಿಯೆಗೆ ಸುದೀರ್ಘ ಸಮಯ ಹಿಡಿಯಲಿದ್ದು, ಎಲೆಕ್ಷನ್ ವಿಳಂಬವಾಗಲಿದೆ ಎಂಬ ಅನುಮಾನ ಮೂಡಿತ್ತು. ಆದರೆ, ಸರ್ಕಾರ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಎಲೆಕ್ಷನ್ ನಡೆಸಲು ತೀರ್ಮಾನಿಸಿರುವುದರಿಂದ ಮುಂದಿನ ವರ್ಷದ ಮಾರ್ಚ್ ವೇಳೆಗೆ ಪಾಲಿಕೆಗಳಲ್ಲಿ ಚುನಾಯಿತ ಸದಸ್ಯರ ಆಡಳಿತ ಪರ್ವಕ್ಕೆ ನಾಂದಿಯಾಡುವ ಸಾಧ್ಯತೆ ಇದೆ.

‘ಕೈ’ ಪಾಳಯದಲ್ಲಿ ಚಟುವಟಿಕೆ ಜೋರು:

ಇತ್ತೀಚಿಗಷ್ಟೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಬಳಿಕ ಆಯಾ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಂದಿಷ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಅವಕಾಶ ದೊರೆತಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಕೂಡ ‘ಬೆಂಗಳೂರು ನಡಿಗೆ’ ಹೆಸರಿನಲ್ಲಿ ನಾಗರಿಕರ ನಾಡಿಮಿಡಿತ ಅರಿಯಲು ಸಂವಾದ, ಚರ್ಚೆ, ಅಹವಾಲು ಆಲಿಕೆ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಎಲೆಕ್ಷನ್ ಎದುರಿಸಲು ತಯಾರಿ ಜೋರಾಗಿ ನಡೆದಿದೆ. ತಿಂಗಳ ಹಿಂದೆಯೇ ನಗರದ ಸಚಿವರಿಗೆ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಉಸ್ತುವಾರಿ ಹೊಣೆ ವಹಿಸಿದೆ. ಶಾಸಕರು ಸೇರಿ ಹಿರಿಯ ಮುಖಂಡರ ಸಮಿತಿಗಳು ರಚನೆಯಾಗಿವೆ. ಬೂತ್ ಮಟ್ಟದಲ್ಲಿ ಜನರ ವಿಶ್ವಾಸ ಗಳಿಸಿರುವವರನ್ನೇ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲು ಪಕ್ಷ ಚಿಂತನೆ ನಡೆಸಿದೆ. ಇದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಆಕಾಂಕ್ಷಿತರ ಪಟ್ಟಿ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಸದ್ಯದಲ್ಲೇ ಶಾಸಕರ ನೇತೃತ್ವದಲ್ಲಿ ಇನ್ನಿತರ ಚಟುವಟಿಕೆ ಆರಂಭಿಸಲು ಕೆಪಿಸಿಸಿ ತಂತ್ರಗಾರಿಕೆ ನಡೆಸಿದೆ.

ಮೈ ಕೊಡವಿದ ಕಮಲ ಪಕ್ಷ:

ಐದು ನಗರ ಪಾಲಿಕೆಗಳ ರಚನೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಾಡಪ್ರಭು ಕೆಂಪೇಗೌಡರು ಕಟ್ಟಿದ್ದ ಬೆಂಗಳೂರನ್ನು 5 ವಿಭಾಗ ಮಾಡಿ ಸ್ಥಳೀಯ ಅಸ್ಮಿತೆಗೆ ಧಕ್ಕೆ ತಂದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಲಾಗಿದೆ. ಆದರೂ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಎದುರಿಸಲು ತಡವಾಗಿ ಸಿದ್ಧತೆ ಆರಂಭಿಸಿದೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಹಿರಿಯ ನಾಯಕರಿಗೆ ಹೊಣೆ ನೀಡುವ ಸಮಿತಿಯನ್ನು ವಾರದ ಹಿಂದೆಯಷ್ಟೇ ರಚಿಸಲಾಗಿದೆ. ಜತೆಗೆ ಉಸ್ತುವಾರಿಗಳನ್ನು ಕೂಡ ನಿಯೋಜಿಸಲಾಗಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಚಾಲನೆ ನೀಡಲಾಗಿದೆ. ವಾರ್ಡ್‌ವಾರು ಟಿಕೆಟ್ ಆಕಾಂಕ್ಷಿತರನ್ನು ಮೀಸಲು ಆಧರಿಸಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ನವೆಂಬರ್‌ನಲ್ಲಿ ಪ್ರಮುಖ ಕಾರ್ಯಕರ್ತರು, ಆಕಾಂಕ್ಷಿತರಿಗೆ ಕಾರ್ಯಾಗಾರ ಸೇರಿ ಇನ್ನಿತರ ಸಭೆಗಳನ್ನು ಆಯೋಜಿಸಲು ಪಕ್ಷವು ವೇಳಾಪಟ್ಟಿಯನ್ನು ಹಾಕಿಕೊಂಡಿದೆ.

ಜೆಡಿಎಸ್‌ನಲ್ಲಿ ಕಾದುನೋಡುವ ತಂತ್ರ:

ಹಿಂದೊಮ್ಮೆ ನಗರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಜೆಡಿಎಸ್ ಕ್ರಮೇಣ ಸಂಘಟನೆ ಕೊರತೆಯಿಂದ ಸೊರಗಿತ್ತು. ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳಲ್ಲೂ ಹೇಳಿಕೊಳ್ಳುವಂತಹ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೂ, ಕಾರ್ಯಕರ್ತರನ್ನು ಸಂಘಟಿಸಿ ಜಿಬಿಎ ವ್ಯಾಪ್ತಿಯಲ್ಲಿ ಗತವೈಭವವನ್ನು ಮರಳಿ ಪಡೆಯಲು ಎಲೆಕ್ಷನ್‌ಗೆ ಕಹಳೆ ಮೊಳಗಿಸಿದೆ. ಚುನಾವಣೆ ಘೋಷಣೆಯಾಗುವವರೆಗೂ ಪಕ್ಷ ಸಂಘಟನೆಗೆ ಒತ್ತು ನೀಡಿ ಬಳಿಕ ಆಕಾಂಕ್ಷಿತರನ್ನು ಅಂತಿಮಗೊಳಿಸುವ ಕಾರ್ಯತಂತ್ರಕ್ಕೆ ಜೆಡಿಎಸ್ ಅಂಟಿಕೊಂಡಂತಿದೆ.

ಪ್ರಮುಖ ಪಕ್ಷಗಳ ಹೊರತಾಗಿಯೂ ಬಿಎಸ್‌ಪಿ, ಆರ್‌ಪಿಐ, ಸಿಪಿಐ ಸಹಿತ ಇನ್ನಿತರ ಸಣ್ಣ ಪಕ್ಷಗಳು ಇನ್ನಷ್ಟೇ ಚುನಾವಣಾ ತಯಾರಿ ನಡೆಸಬೇಕಿದೆ. ಚುನಾವಣಾ ಆಯೋಗವು ಎಲೆಕ್ಷನ್ ಬಗ್ಗೆ ನಿರ್ಧಾರ ಕೈಗೊಂಡ ಬಳಿಕ ಆಯಾ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರುವ ಸಾಧ್ಯತೆ ಇದೆ.

ಮೊದಲ ಬಾರಿಗೆ ಆಪ್ ಸ್ಪರ್ಧೆ:

ಬಿಬಿಎಂಪಿಗೆ 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆಪ್ (ಎಎಪಿ) ಸ್ಪರ್ಧೆ ಮಾಡಿರಲಿಲ್ಲ. ಹಾಗಾಗಿ ಆ ಪಕ್ಷವು ರಾಜಧಾನಿಯಲ್ಲಿ ಅಸ್ತಿತ್ವ ಸಾಬೀತುಪಡಿಸಲು ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯಲು ನಿರ್ಧರಿಸಿದೆ. ತನ್ನ ಸ್ವಂತ ಬಲವನ್ನು ಪರೀಕ್ಷೆಗೆ ಒಡ್ಡಲು ಏಕಾಂಗಿ ಹೋರಾಟಕ್ಕೂ ಅಣಿಯಾಗುತ್ತಿದೆ. ಎರಡು ತಿಂಗಳ ಹಿಂದೆಯೇ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ಹಂತಗಳಲ್ಲಿ ಸರಣಿ ಸಭೆಗಳನ್ನು ಆಯೋಜಿಸಿ ಸಂಘಟನೆಗೆ ಒತ್ತು ನೀಡುವಲ್ಲಿ ಸಕ್ರಿಯವಾಗಿದೆ. ರಾಜ್ಯ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಪಾಲಿಕೆವಾರು ಪೂರ್ವಭಾವಿ ಸಭೆ ಮುಕ್ತಾಯವಾಗಿವೆ. ಆಕಾಂಕ್ಷಿತರ ಪಟ್ಟಿ ತಯಾರಿಗೂ ಚಾಲನೆ ಸಿಕ್ಕಿದೆ. ಸದ್ಯದಲ್ಲೇ 5 ಪಾಲಿಕೆಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಪೂರ್ಣ ಪ್ರಮಾಣದ ತಯಾರಿಗೆ ಚಾಲನೆ ನೀಡಲಿದೆ.

ದೋಸ್ತಿಗಳಲ್ಲಿ ಮೈತ್ರಿಗೆ ಇಂಗಿತ:

ಪ್ರಸ್ತುತ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ದೋಸ್ತಿ ಪಕ್ಷವಾಗಿ ಬಿಂಬಿಸಿಕೊಂಡಿವೆ. ಪಂಚ ಪಾಲಿಕೆ ಚುನಾವಣೆಗೂ ದೋಸ್ತಿ ಮುಂದುವರಿಸುವ ಇಂಗಿತ ಎರಡೂ ಪಕ್ಷಗಳಲ್ಲೂ ವ್ಯಕ್ತವಾಗಿದ್ದು, ಇನ್ನೂ ಅಧಿಕೃತಗೊಂಡಿಲ್ಲ. ಐದೂ ಕಾಪೋರೇಷನ್ ವ್ಯಾಪ್ತಿಯಲ್ಲಿ ಪ್ರಬಲ ಸಂಘಟನೆ ಹೊಂದಿರುವ ಬಿಜೆಪಿಯು ಮೈತ್ರಿ ಮಾಡಿಕೊಳ್ಳಬೇಕೇ, ಬೇಡವೆ ಎಂಬ ಜಿಜ್ಞಾಸೆಯಲ್ಲಿದೆ. ಚುನಾವಣೆ ಘೋಷಣೆಯಾಗುವ ವೇಳೆಗೆ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಎರಡೂ ಪಾಳಯದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ದೃಢಪಡಿಸಿವೆ.

ಪಂಚ ಪಾಲಿಕೆಗಳ ಚುನಾವಣೆಗೆ ಬಿಜೆಪಿ ಪೂರ್ಣ ಪ್ರಮಾಣದ ತಯಾರಿ ನಡೆಸಿದೆ. ಪಕ್ಷದ ಹಿರಿಯ ನೇತೃತ್ವದಲ್ಲಿ ವಿವಿಧ ಸಮಿತಿಗಳು ರಚನೆಯಾಗಿವೆ. ಟಿಕೆಟ್ ಆಕಾಂಕ್ಷಿತರ ಸಂಖ್ಯೆ ದೊಡ್ಡದಿದ್ದು, ತಕ್ಷಣಕ್ಕೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲೆಕ್ಷನ್ ಎದುರಿಸಲಿದ್ದೇವೆ.

- ಎಸ್.ಹರೀಶ್, ಬೆಂ. ಉತ್ತರ ಸಂಘಟನಾ ಜಿಲ್ಲಾ ಪ್ರಮುಖ್ (ಬಿಜೆಪಿ)

ಐದು ನಗರ ಪಾಲಿಕೆಗಳ ಚುನಾವಣೆ ಎದುರಿಸಲು ಪಕ್ಷದಿಂದ ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಸಿದ್ಧತಾ ಸಭೆಗಳನ್ನು ನಡೆಸಲಾಗಿದೆ. ಈಗಾಗಲೇ ಎರಡು ಕಂತಿನಲ್ಲಿ 100 ಆಕಾಂಕ್ಷಿತರ ಪಟ್ಟಿ ಸಿದ್ಧಪಡಿಸಲಾಗಿದೆ. ಎಲೆಕ್ಷನ್​​ ಅನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎದುರಿಸಲಿದ್ದು, ಎಲ್ಲ ಐದೂ ಪಾಲಿಕೆಗಳಲ್ಲಿ ಜೆಡಿಎಸ್​​​-ಬಿಜೆಪಿ ಅಧಿಕಾರಕ್ಕೇರುವುದು ನಿಶ್ಚಿತ.

- ರಮೇಶ್​​ ಗೌಡ, ಜೆಡಿಎಸ್​​ ವಕ್ತಾರ

ಜಿಬಿಎ ವ್ಯಾಪ್ತಿಯ ಪಾಲಿಕೆ ಚುನಾವಣೆ ಎದುರಿಸಲು ಆಮ್ ಆದ್ಮಿ ಪಕ್ಷ 3 ತಿಂಗಳಿನಿಂದಲೇ ತಯಾರಿ ಆರಂಭಿಸಿದೆ. ಬೆಂಗಳೂರು ಕಾರ್ಪೋರೇಷನ್‌ಗೆ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಲಿರುವ ಕಾರಣ ಯೋಜಿತವಾಗಿ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಸ್ಥಳೀಯರಿಗೆ ಟಿಕೆಟ್ ನೀಡಲು ಪಕ್ಷ ಹೆಚ್ಚು ಒಲವು ಹೊಂದಿದೆ. ಸದ್ಯದಲ್ಲೇ ಉಸ್ತುವಾರಿ ಸಮಿತಿ ರಚನೆಯಾಗಲಿದ್ದು, ಇನ್ನಷ್ಟು ಚಟುವಟಿಕೆಗಳತ್ತ ಪಕ್ಷ ದೃಷ್ಟಿ ಹರಿಸಲಿದೆ.

- ಜಗದೀಶ್ ವಿ. ಸದಂ, ಆಪ್ ಮಾಧ್ಯಮ ಸಂಚಾಲಕ (ಕರ್ನಾಟಕ)