ಬೆಂಗಳೂರು: ಬೆಂಗಳೂರು ಮಹಾನಗರವನ್ನು ಜಿಬಿಎ ಹೆಸರಿನಲ್ಲಿ ವಿಭಜಿಸಿ 5 ಪಾಲಿಕೆಗಳನ್ನಾಗಿ ರಚಿಸಿರುವ ರಾಜ್ಯ ಸರ್ಕಾರದ ನಿರ್ಣಯ ಅವೈಜ್ಞಾನಿಕವಾಗಿದ್ದು, ಇಲ್ಲಿನ ಮೂಲ ನಿವಾಸಿಗಳನ್ನು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಸುವ ಹುನ್ನಾರ ನಡೆಸಲಾಗಿದೆ. ಜತೆಗೆ ಐದೂ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವ ಭರದಲ್ಲಿ ಕನ್ನಡಿಗರನ್ನು ಅನಾಥರನ್ನಾಗಿಸುವ ದುರುದ್ದೇಶ ಕಾಂಗ್ರೆಸ್ ಹೊಂದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಪಂಚ ಪಾಲಿಕೆ ರಚಿಸುವ ಭರದಲ್ಲಿ ಸರ್ಕಾರ ಕನ್ನಡೇತರ ಮೇಯರ್‌ಗಳನ್ನು ಆಯ್ಕೆ ಮಾಡಲು ಅವಕಾಶವಾಗುವಂತೆ 5 ಪಾಲಿಕೆಗಳನ್ನು ರಚಿಸಿದಂತಿದೆ. ಇಲ್ಲೆಲ್ಲ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಬೇಕಾದ ತಂತ್ರಗಾರಿಕೆ ಅನುಸರಿಸಿದೆ. ಉತ್ತರ ಹಾಗೂ ಕೇಂದ್ರ ಪಾಲಿಕೆಯು ಉರ್ದು ಮತ್ತು ತಮಿಳು, ದಕ್ಷಿಣ ಪಾಲಿಕೆಯು ಉರ್ದು, ತಮಿಳು, ಭಾಗಶಃ ಕನ್ನಡ, ಪೂರ್ವ ಪಾಲಿಕೆಯು ತೆಲುಗು, ಉತ್ತರ ಭಾರತೀಯರು ಮೇಯರ್ ಆಗುವ ರೀತಿ ಪಾಲಿಕೆ ರಚಿಸಲಾಗಿದೆ. ಪಶ್ಚಿಮ ಪಾಲಿಕೆ ಮಾತ್ರ ಕನ್ನಡಗ ಮೇಯರ್ ಕಾಣಬಹುದಾಗಿದ್ದು, ಈ ದುರುದ್ದೇಶವನ್ನು ಕೈಬಿಟ್ಟು ಮೂಲ ಬೆಂಗಳೂರು ಹಾಗೂ ಕನ್ನಡಿಗರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಹಿಂದೆ ಅಸ್ತಿತ್ವದಲ್ಲಿದ್ದ ಬಿಬಿಎಂಪಿಯ 198 ವಾರ್ಡ್‌ಗಳಿಗೆ ಎರಡು ಬಾರಿ ಚುನಾವಣೆ ನಡೆದಾಗ ಕಾಂಗ್ರೆಸ್ ಕ್ರಮವಾಗಿ 58 ಹಾಗೂ 76 ಸ್ಥಾನಗಳನ್ನಷ್ಟೇ ಪಡೆದು ಅಧಿಕಾರ ವಂಚಿತವಾಗಿತ್ತು. ಜತೆಗೆ ಈವರೆಗೂ ರಾಜಧಾನಿಯಲ್ಲಿ ಬಿಜೆಪಿಗಿಂತ ಹೆಚ್ಚಿನ ಶಾಸಕರನ್ನು ಹೊಂದಲು ಸಾಧ್ಯವಾಗಿಲ್ಲ. ಹೀಗಾಗಿ 5 ಪಾಲಿಕೆ ರಚಿಸಿ ಅಧಿಕಾರ ಹಿಡಿಯುವ ಹಠಕ್ಕೆ ಬಿದ್ದಿದೆ. ಇಂತಹ ಕನ್ನಡ ವಿರೋಧಿ ನಿರ್ಣಯವನ್ನು ಸಿದ್ಧರಾಮಯ್ಯ ಸರ್ಕಾರವು ತೆಗೆದುಕೊಳ್ಳುವ ಮೂಲಕ ಕನ್ನಡಿಗರಿಗೆ ಮುಂದೆಂದೂ ಸರಿಪಡಿಸಲಾಗದಂತಹ ಅನ್ಯಾಯ ಮಾಡಲು ಹೊರಟಿದೆ ಎಂದು ಅವರು ದೂರಿದ್ದಾರೆ.
ಅಧಿಕಾರ ವಿಕೇಂದ್ರೀಕರಣ ಮಾಡಲಿ:
ಬೆಂಗಳೂರಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ಹೈದರಾಬಾದ್‌ಗಳಲ್ಲಿ ಒಂದೇ ಪಾಲಿಕೆ ಅಸ್ತಿತ್ವದಲ್ಲಿದೆ. ಇದೇ ರೀತಿ ಬೆಂಗಳೂರಿಗೂ ಒಂದೇ ಕಾರ್ಪೊರೇಷನ್ ಇರಬೇಕು. ಬೇಕಿದ್ದಲ್ಲಿ ವಲಯಗಳಿಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಆಫೀಸರ್‌ಗಳನ್ನು ನೇಮಿಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡುವ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ಸಿಎಂ ಹಾಗೂ ಡಿಸಿಎಂಗೆ ಬರೆದಿರುವ ಪತ್ರದಲ್ಲಿ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.