ಚಿಕ್ಕೋಡಿ : ಜೈನಾಪುರ ಅರಿಹಂತ ಶುಗರ್ ಇಂಡಸ್ಟ್ರಿಯಲ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ವರ್ಷದಲ್ಲಿ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆಯ ಮುಖಂಡ ಉತ್ತಮ ಪಾಟೀಲ ಹೇಳಿದರು.
ಸಮೀಪದ ಜೈನಾಪುರ ಅರಿಹಂತ ಶುಗರ್ ಇಂಡಸ್ಟ್ರಿಯಲ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ 3ನೇ ವರ್ಷದ ಹಂಗಾಮಿನ ಬಾಯ್ಲರ್ ಪ್ರದೀಪನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ವರ್ಷದಲ್ಲಿ ಉತ್ತಮವಾಗಿ ಕಬ್ಬು ನುರಿಸಲಾಗಿದ್ದು, ಜಿಲ್ಲೆಯ ಕಾರ್ಖಾನೆಗಳು ನೀಡಿದ ಬೆಲೆಯನ್ನು ನಮ್ಮ ಕಾರ್ಖಾನೆ ನೀಡಿದೆ ಎಂದರು. ಜಿಲ್ಲೆಯ ಗಡಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬು ಇರುವುದರಿಂದ ಈ ಬಾರಿ ಕಾರ್ಖಾನೆಯು 5 ಲಕ್ಷ ಮೆ. ಟನ್ ಕಬ್ಬು ನುರಿಸುವ ಸಂಕಲ್ಪ ಇಟ್ಟುಕೊಂಡಿದೆ ಎಂದರು. ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯ ಜೈನಾಪುರ ಕ್ರಾಸ್‌ದಿಂದ ಸಕ್ಕರೆ ಕಾರ್ಖಾನೆವರೆಗೆ ಸಚಿವ ರಮೇಶ ಜಾರಕಿಹೊಳಿ ಅವರು ನೀರಾವರಿ ಇಲಾಖೆಯಿಂದ 3.50 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಿಸಿದ್ದಾರೆ. ಇದಕ್ಕೆ ಶಾಸಕ ದುರ್ಯೋಧನ ಐಹೊಳೆ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು. ಹಿರಿಯ ಧುರೀಣ ಬಿ.ಆರ್. ಸಂಗಪ್ಪಗೋಳ ಮಾತನಾಡಿ, ಬರಪೀಡಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕರೋಶಿ ಜಿಪಂ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿರುವುದು ರೈತರಿಗೆ ವರದಾನವಾಗಿದೆ. ಈ ಭಾಗದಲ್ಲಿ ಏತ ನೀರಾವರಿ ಯೋಜನೆ ರೂಪಿಸಬೇಕೆಂದು ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಮಾಡಿದಾಗ, ಸಚಿವರು ಹನುಮಾನ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಈ ಭಾಗದ ಎಲ್ಲ ಮುಖಂಡರು ಮತ್ತು ಅರಿಹಂತ ಸಮೂಹದ ಮುಖಂಡ ಉತ್ತಮ ಪಾಟೀಲ ನೇತೃತ್ವದಲ್ಲಿ ಶೀಘ್ರದಲ್ಲೇ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿದರು.
ತೋರಣಹಳ್ಳಿ ಹನುಮಾನ ದೇವರ ಪಲ್ಲಕ್ಕಿಗೆ ಅಭಿನಂದನ ಮತ್ತು ವಿನಯ ಪಾಟೀಲ ಪೂಜೆ ಸಲ್ಲಿಸಿದರು. ಬಳಿಕ ಗಣ್ಯರಿಂದ 3ನೇ ಬಾಯ್ಲರ ಪ್ರದೀಪನ ಸಮಾರಂಭಕ್ಕೆ ಚಾಲನೆ ನೀಡಿದರು. ಬಾಲಚಂದ್ರ ಪಾಟೀಲ, ಜಿವಂಧರ ಪಾಟೀಲ, ರಾಜು ಮಗದುಮ್ಮ, ಶಾಮ ರೇವಡೆ ಇತರರಿದ್ದರು.