ಬೇಲೂರು: ಪಟ್ಟಣದ ಚನ್ನಕೇಶವ ದೇವಾಲಯ ರಸ್ತೆಯಲ್ಲಿರುವ ಕೇಕ್ ಕಾರ್ನರ್‌ನಲ್ಲಿ ಮಂಗಳವಾರ ಬೆಳಗ್ಗೆ 2.30ರ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಲಕ್ಷಾಂತರ ರೂ.ನ ಕೇಕ್, ತಂಪು ಪಾನೀಯ ನಷ್ಟವಾಗಿದೆ.
ಕೇಕ್ ಕಾರ್ನರ್ ಮಾಲೀಕ ಹೊಸ ವರ್ಷಾಚರಣೆಗಾಗಿ ಸೋಮವಾರ ವಿವಿಧ ಮಾದರಿಯ ಲಕ್ಷಾಂತರ ರೂ. ಮೌಲ್ಯದ ಕೇಕ್ ತಯಾರಿಸಿಟ್ಟು ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದರು. ಮಂಗಳವಾರ ಬೆಳಗಿನ ಸಮಯ 2.30ರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕೇಕ್ ಕಾರ್ನರ್‌ಒಳಗಿನಿಂದ ಶಬ್ದ ಬಂದಿದೆ. ಪಕ್ಕದ ಮನೆಯ ನಂದೀಶ್ ಎಂಬವರು ಮನೆಯಿಂದ ಹೊರಗೆ ಬಂದು ನೋಡಿದಾಗ ಕೇಕ್ ಕಾರ್ನರ್‌ನಿಂದ ಬೆಂಕಿಯೊಂದಿಗೆ ಹೊಗೆ ಬರುತ್ತಿರುವುದನ್ನು ಗಮನಿಸಿ ಮಾಲೀಕರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೇಕ್ ಕಾರ್ನರ್ ಬಾಗಿಲು ತೆಗೆದು ಬೆಂಕಿಯನ್ನು ನಂದಿಸಿದರು. ಅವಘಡದಿಂದ 5 ಲಕ್ಷ ರೂ, ಬೆಲೆಬಾಳುವ ಕೇಕ್‌ಗಳು, 3.5 ಲಕ್ಷ ರೂ. ಮೌಲ್ಯದ ಪ್ರೀಡ್ಜ್, ಓವನ್, ಹಿಟರ್, ಸ್ಟೀಮರ್, ಶೋಕೇಸ್‌ಗಳು, ಚೇರ್‌ಗಳು ಬೆಂಕಿಗಾಹುತಿಯಾಗಿದ್ದು ಅಂದಾಜು 7ರಿಂದ 8 ಲಕ್ಷ ನಷ್ಟ ಸಂಭವಿಸಿದೆ ಎಂದು ಮಾಲೀಕ ಆಕ್ರಂ ತಿಳಿಸಿದ್ದಾರೆ.